ತುಮಕೂರು: ರಸ್ತೆಯಲ್ಲಿ ಒಂದು ರೂಪಾಯಿ ಕಂಡರೂ ತಕ್ಷಣ ಎತ್ತಿ ಜೇಬಿಗಿಟ್ಟುಕೊಳ್ಳವವರೇ ಹೆಚ್ಚು, ಇನ್ನು ಚಿನ್ನಾಭರಣ ಸಿಕ್ಕರೆ ಬಿಡ್ತಾರಾ? ಚಿನ್ನ ಅಥವಾ ಹಣ ಕಳೆದುಕೊಂಡವರು ಪಕ್ಕದಲ್ಲಿ ಗೋಳಾಡುತ್ತಿದ್ದರೂ ತಮಗೇನೂ ಗೊತ್ತಿಲ್ಲ ಎಂಬಂತೆ ಕ್ಷಣಾರ್ಧದಲ್ಲೇ ಮಾಯವಾಗಿ ಬಿಡ್ತಾರೆ. ಅಂತಹ ಕಾಲದಲ್ಲಿ ಇಲ್ಲೊಬ್ಬ ಕಂಡಕ್ಟರ್ ಮಾದರಿಯಾಗಿ ನಿಲ್ಲುತ್ತಾರೆ. ಬಸ್ನಲ್ಲಿ ಸಿಕ್ಕ ಚಿನ್ನದ ಆಭರಣವನ್ನು ಸಂಬಂಧಪಟ್ಟವರಿಗೆ ಖುದ್ದು ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.
ಮಾನವೀಯತೆ ಮೆರೆದ ಕಂಡಕ್ಟರ್ ಹೆಸರು ಶ್ರೀಧರ್. ಮಧುಗಿರಿ ಕೆಎಸ್ರ್ಟಿಸಿ ಡಿಪೋದಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಧುಗಿರಿಯಿಂದ ಬೆಂಗಳೂರಿಗೆ ಹೋಗುವಾಗ ಬಸ್ನಲ್ಲಿಯೇ ಪ್ರಯಾಣಿಕರೊಬ್ಬರು ಬ್ಯಾಗ್ವೊಂದನ್ನು ಮರೆತು ಹೋಗಿದ್ದರು. ಅದರಲ್ಲಿ ಒಂದು ಜೊತೆ ಚಿನ್ನದ ಕಿವಿಯೋಲೆ, ಬೆಳ್ಳಿ ಕಾಲ್ಗೆಜ್ಜೆ ಇತ್ತು. ಇದನ್ನು ಕಳೆದುಕೊಂಡವರು ಅದೆಷ್ಟು ಗೋಳಾಡುತ್ತಿದ್ದಾರೋ ಎಂದು ಮರುಗಿದ ಕಂಡಕ್ಟರ್, ಕೂಡಲೇ ಅದನ್ನು ಸಂಬಂಧಪಟ್ಟವರಿಗೆ ತಲುಪಿಸಲು ಯತ್ನಿಸುತ್ತಿದ್ದರು.
ಈ ಬ್ಯಾಗ್ ಇರಕಸಂದ್ರ ಕಾಲನಿಯ ಲಲಿತ ಎಂಬುವರಿಗೆ ಸೇರಿದ್ದಾಗಿದೆ. ಬೆಂಗಳೂರಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಬ್ಯಾಗ್ ಅನ್ನು ಲಲಿತಾಗೆ ಶ್ರೀಧರ್ ಹಸ್ತಾಂತರಿಸಿದ್ದಾರೆ.