ಬೆಂಗಳೂರು: ಮೈಕೋ ಲೇಔಟ್‌ನಲ್ಲಿ ಲಾರಿ ಚಕ್ರ ಹರಿದು ಖಾಸಗಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೂಡಿಗೆರೆ ಮೂಲದ ಮಹೇಶ್(32) ಮೃತರು. ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿರುವ ಮಹೇಶ್, ವರ್ತೂರು ಬಳಿಯಿರುವ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ವರ್ತೂರಿನಲ್ಲೇ ವಾಸವಾಗಿದ್ದಾರೆ. ಬುಧವಾರ ತಡರಾತ್ರಿ ೧.೩೦ರ ಸುಮಾರಿಗೆ ಕೋರಮಂಗಲ ಸಮೀಪದ ಡೈರಿ ಸರ್ಕಲ್‌ನಿಂದ ಮಡಿವಾಳ ಕಡೆ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಕ್ರೈಸ್ಟ್ ವಿಶ್ವವಿದ್ಯಾಲಯ ಮುಂಭಾಗ ನಿಂತಿದ್ದ ಸಿಮೆಂಟ್ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದುಕೊಂಡಿದ್ದಾರೆ. ಪರಿಣಾಮ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಅದೇ ಮಾರ್ಗದಲ್ಲಿ ಬಂದ ಮತ್ತೊಂದು ಲಾರಿಯ ಚಕ್ರಗಳು ಮಹೇಶ್‌ನ ಕಾಲುಗಳ ಮೇಲೆ ಹರಿದಿದ್ದು, ತೀವ್ರ ರಕ್ತಸ್ರಾವವಾಗಿದೆ. ಹೀಗಾಗಿ ಮಹೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೃತ್ಯ ಎಸಗಿದ ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೈಕೋ ಲೇಔಟ್ ಸಂಚಾರ ಪೊಲೀಸರು ತಿಳಿಸಿದ್ದಾರೆ.