ಬೀರೂರು: ಬೀರೂರಿನ ರೈಲ್ವೆ ಗೇಟ್ ಸಮೀಪ ಕೆಎಸ್‌ಆರ್‌ಟಿಸಿ ಬಸ್‌ಗೆ ಮದ್ಯದ ಬಾಟಲಿ ಎಸೆದು ಗಾಜಿಗೆ ಹಾನಿ ಮಾಡಿದ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬಸ್ ಚಾಲಕ ಸತೀಶ್ ನೀಡಿದ ದೂರಿನನ್ವಯ ಹೋರಿತಿಮ್ಮನಹಳ್ಳಿ ಗ್ರಾಮದ ವಾಸಿಗಳಾದ ಕಿರಣ, ಶಶಿ, ಸಚಿನ್ ಮತ್ತು ಸುಪ್ರಿತ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಕಡೂರು ಕಡೆಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಬಸ್‌ಗೆ ಹೋರಿತಿಮ್ಮನಹಳ್ಳಿ ಗೇಟ್ ಸಮೀಪ ಕಾರಿನ ಚಾಲಕ ಬಸ್ಸನ್ನು ಓವರ್‌ಟೇಕ್ ಮಾಡಿ ಬಸ್‌ನ ಮುಂಭಾಗದ ಗಾಜಿನ ಮೇಲೆ ಮದ್ಯದ ಬಾಟಲಿ ಎಸೆದು ಗಾಜನ್ನು ಒಡೆದಿದ್ದ. ಈ ಸಂಬಂಧ ಬಸ್ ಚಾಲಕ ಬಸ್ ನಿಲ್ಲಿಸಿ ಕಾರಿನಲ್ಲಿದ್ದ ನಾಲ್ವರನ್ನು ಪ್ರಶ್ನಿಸಿದಾಗ ಚಾಲಕನಿಗೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಸತೀಶ್‌ನನ್ನು ಸ್ಥಳೀಯರು ಮತ್ತು ಬಸ್ ಪ್ರಯಾಣಿಕರು ಬೀರೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಗೆ ಸಬಂಧಿಸಿದಂತೆ ಯುವಕ ಕಿರಣ್ ಎಂಬಾತ ಬಸ್ ಚಾಲಕನ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾನೆ. ನಾನು ಮತ್ತು ಸ್ನೇಹಿತರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಹಿಂದೆ ಬರುತ್ತಿದ್ದ ಬಸ್ ಎರಡ್ಮೂರು ಕಡೆ ಕಾರಿಗೆ ಗುದ್ದುವಂತೆ ಹತ್ತಿರಕ್ಕೆ ಬಂದಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಚಾಲಕ ನಮ್ಮ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾನೆ.