ಮಾಲ್ದೀವ್ಸ್ ಚೀನಾದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂಬುದು ಮತ್ತೊಮ್ಮೆ ಸ್ಪಷ್ಟಗೊಂಡಿದೆ. ಭಾರತದ ನೆರೆಯ ರಾಷ್ಟ್ರಗಳಾದ ನೇಪಾಳ, ಬಾಂಗ್ಲಾದೇಶದಲ್ಲಿ ಈಗಾಗಲೇ ತನ್ನ ಪ್ರಭಾವ ಹೆಚ್ಚಿಸಿಕೊಂಡಿರುವ ಚೀನಾ, ಭಾರತದ ಪ್ರಾಬಲ್ಯ ಕಡಿಮೆಗೊಳಿಸಲು ಹವಣಿಸುತ್ತಲೇ ಇರುತ್ತದೆ. ಮಾಲ್ದೀವ್ಸ್ನ ನೂತನ ಅಧ್ಯಕ್ಷ ಮೊಹಮ್ಮದ್ ಮುಹಿಜು ಚೀನಾ ನಾಯಕತ್ವಕ್ಕೆ ಆಪ್ತರು. ಮುಹಿಜು ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ, ಭಾರತವಿರೋಧಿ ಧೋರಣೆಗಳನ್ನು ತಳೆದರು. ಮತ್ತು ಮಾಲ್ದೀವ್ಸ್ನಲ್ಲಿ ಭಾರತೀಯ ಸೇನೆಯ ಉಪಸ್ಥಿತಿಯನ್ನು ವಿರೋಧಿಸಿದರು.
ಈ ವಿವಾದ ತಣ್ಣಗಾಗುವ ಮುಂಚೆಯೇ, ಅಲ್ಲಿನ ಸರ್ಕಾರದ ಕೆಲ ಸಚಿವರು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು, ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಪ್ರವಾಸೋದ್ಯಮದ ಆದಾಯವನ್ನೇ ಬಹುವಾಗಿ ನೆಚ್ಚಿಕೊಂಡಿರುವ ಈ ದ್ವೀಪರಾಷ್ಟ್ರ, ನಷ್ಟ ತಪ್ಪಿಸಿಕೊಳ್ಳಲು ಕ್ರಮ ಕೈಗೊಂಡಿದೆ. ಭಾರತವಿರೋಧಿ ಹೇಳಿಕೆ ನೀಡಿದ ಮೂವರು ಸಚಿವರನ್ನು ಅಮಾನತು ಮಾಡಿದೆ. ಅಲ್ಲದೆ, ‘ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಸಚಿವರ ವೈಯಕ್ತಿಕ ಅಭಿಪ್ರಾಯಗಳಾಗಿದ್ದು, ಸರ್ಕಾರಕ್ಕೂ ಅದಕ್ಕೂ ಸಂಬಂಧವಿಲ್ಲ’ ಎಂದು ನುಣುಚಿಕೊಂಡಿದೆ.
ಸಾಮಾಜಿಕ ಮಾಧ್ಯಮಗಳಲ್ಲೇ ಮಾಲ್ದೀವ್ಸ್ಗೆ ತಿರುಗೇಟು ನೀಡಿದ ಭಾರತೀಯರು ‘ಬಾಯ್ಕಾಟ್ ಮಾಲ್ದೀವ್ಸ್’ ಅಭಿಯಾನವನ್ನೇ ನಡೆಸಿದರು. ಕೆಲವೇ ತಾಸುಗಳಲ್ಲಿ 6 ಲಕ್ಷಕ್ಕೂ ಅಧಿಕ ಪೋಸ್ಟ್ಗಳು ದಾಖಲಾದವು. ಅಲ್ಲದೆ, ಮಾಲ್ದೀವ್ಸ್ನ ಹೋಟೆಲ್ಗಳಲ್ಲಿ ಭಾರತೀಯ ಪ್ರವಾಸಿಗರು ಕಾದಿರಿಸಿದ್ದ 7500 ಕೋಣೆಗಳು, ವಿಮಾನದ 2300 ಸೀಟುಗಳು ರದ್ದಾದವು. ಪ್ರತಿ ವರ್ಷ ಎರಡು ಲಕ್ಷಕ್ಕೂ ಅಧಿಕ ಭಾರತೀಯರು ಮಾಲ್ದೀವ್ಸ್ಗೆ ಭೇಟಿ ನೀಡುತ್ತಿದ್ದಾರೆ. ಹಾಗಂತ, ಭಾರತ ಹೊಂದಿರುವ ಪ್ರವಾಸೋದ್ಯಮದ ಶಕ್ತಿ ಮತ್ತು ಅವಕಾಶಗಳನ್ನು ನಿರ್ಲಕ್ಷಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ‘ಹೊರದೇಶಗಳ ಕಡಲುತೀರಗಳಿಗಿಂತ ಲಕ್ಷದ್ವೀಪದ ಸೌಂದರ್ಯ ಕಡಿಮೆಯಿಲ್ಲ’ ಎಂದಿದ್ದರು.
ಇದು ಮಾಲ್ದೀವ್ಸ್ನ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ, ಈ ವಿಷಯದಲ್ಲಿ ವಿವಾದ ಸೃಷ್ಟಿಸುವ ಅಗತ್ಯವೇ ಇರಲಿಲ್ಲ. ಯಾವುದೇ ದೇಶವಾದರೂ ತನ್ನ ಅಭಿವೃದ್ಧಿಯ ಅವಕಾಶಗಳನ್ನು ಮುಕ್ತವಾಗಿ ಹೇಳಿಕೊಳ್ಳುತ್ತದೆ. ಆ ಬಗ್ಗೆ ಜನರನ್ನು ಜಾಗೃತರನ್ನಾಗಿ ಮಾಡುತ್ತದೆ. ಹಾಗಾಗಿ, ಪ್ರಧಾನಿ ಲಕ್ಷದ್ವೀಪ ಭೇಟಿಯ ಬಳಿಕ, ಜನರು ಮಾಲ್ದೀವ್ಸ್ ಪ್ರವಾಸಯೋಜನೆ ರದ್ದು ಮಾಡಿ, ನಮ್ಮ ದೇಶಗಳ ಕಡಲತೀರಗಳಿಗೆ ಭೇಟಿ ನೀಡಲು ಉತ್ಸುಕರಾಗಿದ್ದು ಸ್ವಾಭಾವಿಕವೇ. ‘ಹೊರದೇಶಗಳಲ್ಲಿ ವಿವಾಹ ಸಮಾರಂಭಗಳನ್ನು ಆಯೋಜಿಸುವುದಕ್ಕಿಂತ ಭಾರತದಲ್ಲೇ ನಡೆಸಿ, ಇದರಿಂದ ಸ್ಥಳೀಯ ಆರ್ಥಿಕತೆಗೆ ಅನುಕೂಲವಾಗುತ್ತದೆ’ ಎಂದಿದ್ದರು ಮೋದಿ. ಪ್ರವಾಸೋದ್ಯಮ ವಿಷಯದಲ್ಲೂ ಇದು ಅನ್ವಯವಾಗುತ್ತದೆ. ಅದೇನೆ ಇದ್ದರೂ, ಇಂಥ ವಿವಾದಗಳು ಎರಡು ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧವನ್ನು ಹಾಳುಗೆಡವಬಾರದು. ಅನಗತ್ಯವಾಗಿ ಮತ್ತೊಂದು ದೇಶವನ್ನು ಟೀಕಿಸಿದರೆ ಏನು ಪರಿಣಾಮ ಅನುಭವಿಸಬೇಕಾಗುತ್ತದೆ ಎಂಬ ಪಾಠ ಮಾಲ್ದೀವ್ಸ್ಗೆ ಸಿಕ್ಕಿದೆ.