ನ್ಯೂಸ್

ಯುವಕನ ಮೇಲೆ ಚಿರತೆ ದಾಳಿ

ರಾಜಣ್ಣ

ಪಿರಿಯಾಪಟ್ಟಣ: ಕೃಷಿ ಕೆಲಸಕ್ಕೆ ಜಮೀನಿಗೆ ತೆರಳಿದ್ದ ಯುವಕನೊಬ್ಬನ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದೆ.


ಗ್ರಾಮದ ಚಂದ್ರೇಗೌಡ ಅವರ ಪುತ್ರ ರಾಜೇಶ್ ಗಾಯಗೊಂಡ ಯುವಕ. ಭಾನುವಾರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ದಾಳಿ ನಡೆಸಿರುವ ಚಿರತೆ, ರಾಜೇಶ್ ಅವರ ಕಿವಿ ಭಾಗದಲ್ಲಿ ಗಾಯಗೊಳಿಸಿ ಪರಾರಿಯಾಗಿದೆ. ತಕ್ಷಣ ಅವರನ್ನು ಸ್ಥಳೀಯರು ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು.


ವಿಷಯ ತಿಳಿದು ಸ್ಥಳಕ್ಕೆ ಆರ್‌ಎಫ್‌ಒ ಕಿರಣ್‌ಕುಮಾರ್, ಡಿಆರ್‌ಎಫ್‌ಒ ಪಾರ್ವತಿ, ಗಾರ್ಡ್ ರಾಜು, ಸತೀಶ್, ಚಾಲಕ ಪುನೀತ್ ಆಗಮಿಸಿ ಸ್ಥಳ ಪರಿಶೀಲಿಸಿ ಸ್ಥಳೀಯರಿಂದ ಮಾಹಿತಿ ಕಲೆ ಹಾಕಿ ಚಿರತೆ ಸೆರೆಗೆ ಕ್ರಮ ಕೈಗೊಂಡಿದ್ದಾರೆ.


ಅರಣ್ಯ ಇಲಾಖೆ ಹುಣಸೂರು ವಿಭಾಗದ ಡಿಸಿಎಫ್ ಸೀಮಾ, ಎಸಿಎಫ್ ಮಹದೇವ್ ಅವರ ಸೂಚನೆಯ ಮೇರೆಗೆ ಆರ್‌ಎಫ್‌ಒ ಕಿರಣ್‌ಕುಮಾರ್ ಮತ್ತು ಡಿಆರ್‌ಎಫ್‌ಒ ಪಾರ್ವತಿ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜೇಶ್ ಆರೋಗ್ಯ ವಿಚಾರಿಸಿದ್ದಾರೆ.


ಸೋಮವಾರ ಬೆಳಗ್ಗೆ ಚಿರತೆ ದಾಳಿ ನಡೆಸಿದ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಿ ಎರಡು ಬೋನು ಇರಿಸಿ, ಸ್ಥಳೀಯರು ಆ ಸ್ಥಳದಲ್ಲಿ ಓಡಾಡದಂತೆ ಎಚ್ಚರಿಕೆ ನೀಡಿ ಚಿರತೆ ಸೆರೆಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ.