ನ್ಯೂಸ್

ಕಾರ್ಕಳದಲ್ಲಿ ಕಾಲೇಜು ಉಪನ್ಯಾಸಕಿ ಆತ್ಮಹತ್ಯೆ

ಕಾರ್ಕಳ: ಕಾಲೇಜು ಉಪನ್ಯಾಸಕಿಯೊಬ್ಬರು ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪೆರ್ವಾಜೆಯಲ್ಲಿ ಸೋಮವಾರ ಸಂಭವಿಸಿದೆ.

ಆರ್​.ಮಮತಾ ಶೆಟ್ಟಿ(42) ಮೃತರು. ತೆಳ್ಳಾರಿ ಮೂಲದ ಇವರು ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಕಾಲೇಜಿನ ನಾಯಕಿಯಾಗಿ ಎಸ್‌ಎಫ್‌ಐ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ವಿದ್ಯಾರ್ಥಿ ಚಳವಳಿಗಳಲ್ಲೂ ಸಕ್ರಿಯರಾಗಿದ್ದರು. ನಂತರ ಇದೇ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದರು.

ಮದುವೆಯಾದ ಬಳಿಕ ಪೆರ್ವಾಜೆಯಲ್ಲಿ ವಾಸವಿದ್ದರು. ಸೋಮವಾರ ಬೆಳಗ್ಗೆ ಮನೆಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಬದುಕಿಗೆ ಅಂತ್ಯ ಹೇಳಿದ್ದಾರೆ. ಮಧುಮೇಹ ಹಾಗೂ ಮಾನಸಿಕ ಖಿನ್ನತೆಯೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.