ಪಿರಿಯಾಪಟ್ಟಣ ತಾಲೂಕು ಆಡಳಿತ ವತಿಯಿಂದ ಬುಧವಾರ ಅಯೋಜಿಸಲಾಗಿದ್ದ ಡಿ.ದೇವರಾಜ ಅರಸು ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ಡಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಿಸರ್ಗ ಪ್ರಿಯಾ, ಸುನೀಲ್ ಕುಮಾರ್, ಹೊಸಳ್ಳಿ ಕೃಷ್ಣೇಗೌಡ, ಈರಯ್ಯ, ಈ.ಪಿ.ಲೋಕೇಶ್, ಎಸ್.ರಾಮು, ಕೆ.ಹೊಲದಪ್ಪ ಇತರರು ಇದ್ದರು.  
ನ್ಯೂಸ್

ತಳ ಸಮುದಾಯಗಳ ಪ್ರಗತಿಗೆ ಶ್ರಮಿಸಿದ ನಾಯಕ

ಪಿರಿಯಾಪಟ್ಟಣ : ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃದ್ಧಿಗಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಡಿ.ದೇವರಾಜ ಅರಸು ಅವರು ಬಡವರ ಆಶಾಕಿರಣವಾಗಿದ್ದರು ಎಂದು ಶಿಕ್ಷಕ ಸಿ.ಕೆ. ಕುಮಾರ್ ತಿಳಿಸಿದರು.

ಪಟ್ಟಣದ ಡಿ.ದೇವರಾಜ ಅರಸು ಭವನದಲ್ಲಿ ತಾಲೂಕು ಆಡಳಿತ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಡಿ.ದೇವರಾಜ ಅರಸು ಅವರ 110 ನೇ ಜಯಂತಿ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನಾಡಿದರು.

ತಮ್ಮ ಆಡಳಿತ ಅವಧಿಯಲ್ಲಿ ಸಮಾಜದಲ್ಲಿ ಅಂದು ಅಸ್ತಿತ್ವದಲ್ಲಿದ್ದ ಜೀತ ಪದ್ಧತಿ, ಮಲ ಹೊರುವ ಪದ್ಧತಿಗಳು ಸೇರಿದಂತೆ ಸಾಮಾಜಿಕ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡುವಲ್ಲಿ ದೇವರಾಜ ಅರಸು ಅವರ ಪಾತ್ರ ಮಹತ್ವದ್ದಾಗಿದೆ. ಉಳುವನೇ ಭೂ ಒಡೆಯ ಎಂಬ ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಶ್ರೀಮಂತರ ವಿರೋಧ ಕಟ್ಟಿಕೊಂಡರು, ತಳ ಸಮುದಾಯದ ಪ್ರಗತಿಗೆ ಶ್ರಮಿಸಿ ಅವರಿಗೆ ಧ್ವನಿಯಾಗಿ, ಉಸಿರಾಗಿ ಬದುಕಿದವರು ಎಂದರು.

ನೀರಾವರಿ ಕ್ಷೇತ್ರದಲ್ಲಿ ಡಿ.ದೇವರಾಜ ಅರಸು ಅವರು ಜಾರಿಗೆ ತಂದ ಪ್ರಮುಖ ಯೋಜನೆಗಳು ರೈತರಿಗೆ ಆಶಾದಾಯಕವಾಗಿವೆ. ಜೀತ ಮುಕ್ತ ಪದ್ಧತಿ, ಉಳುವವನೇ ಭೂ ಒಡೆಯ ಮುಂತಾದ ಜನಪ್ರಿಯ ಯೋಜನೆಗಳು ಹಲವರ ವಿರೋಧದ ನಡುವೆಯೂ ಜಾರಿಗೆ ತಂದಿದ್ದಾರೆ. ಜೀತಪದ್ಧತಿ ನಿರ್ಮೂಲನೆ, ವಿದ್ಯಾರ್ಥಿನಿಲಯಗಳ ಆರಂಭ, ಶಿಷ್ಯವೇತನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಬಡವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದಾರೆ ಎಂದರು.

ತಹಸೀಲ್ದಾರ್ ನಿಸರ್ಗ ಪ್ರಿಯಾ ಮಾತನಾಡಿ, ಸಾಮಾಜಿಕ ನ್ಯಾಯದ ಹರಿಕಾರ ರಾಜ್ಯ ಕಂಡ ಶ್ರೇಷ್ಠ ಮಾನವತಾವಾದಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಸಮ ಸಮಾಜದ ನಿರ್ಮಾಣದ ರೂವಾರಿಗಳಾಗಿದ್ದಾರೆ. ಉಳುವವನೇ ಭೂಮಿಯ ಒಡೆಯ, ಹಾವನೂರು ವರದಿಯಂತಹ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಇಂದಿನ ಯುವ ಸಮುದಾಯದ ಏಳಿಗೆಗೆ ಕಾರಣರಾಗಿದ್ದಾರೆ ಎಂದರು.

ತಾಲೂಕು ಪಂಚಾಯಿತಿ ಇಒ ಸುನೀಲ್ ಕುಮಾರ್, ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಹೊಸಳ್ಳಿ ಕೃಷ್ಣೇಗೌಡ, ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಈ.ಪಿ.ಲೋಕೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೆ.ಹೊಲದಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ರಾಮು, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಈರಯ್ಯ, ಮುಖಂಡರಾದ ಶಫಿ ಅಹಮದ್, ಪುಟ್ಟರಾಜು, ಲಕ್ಷಿನಾರಾಯಣ , ನಾಗಣ್ಣ, ಪಿ.ಮಹದೇವ್, ವಿಜಯಕುಮಾರ್ ಅರವಿಂದ ರಾಜ್ ಅರಸ್ ,ಕೃಷ್ಣ ಅರಸ್, ವಿನಯ್ ರಾಜ್ ಅರಸ್, ಸುಬ್ರಮಣ್ಯ ರಾಜ್ ಅರಸ್, ವಿಜಯ್ ದೇವರಾಜ್ ಅರಸ್, ಸತೀಶ್ ರಾಜ್ ಅರಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.