ಶಿಕಾರಿಪುರ ತಾಲೂಕಿನ ಬಗನಕಟ್ಟೆಯಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರವನ್ನು ಶಾಸಕ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು. ಹನುಮಂತಪ್ಪ, ಲೋಕೇಶ್, ಡಾ. ನಟರಾಜ್, ಡಾ. ನವೀದ್ ಖಾನ್ ಇತರರಿದ್ದರು.  
ನ್ಯೂಸ್

ನಾಯಕನಿಗೆ ಜನರ ಸಮಸ್ಯೆಗಳ ಅರಿವು ಅವಶ್ಯ

ಶಿಕಾರಿಪುರ: ಅಭಿವೃದ್ಧಿ ಎಂದರೆ ಕೇವಲ ಕಟ್ಟಡ ಮತ್ತು ರಸ್ತೆಗಳಲ್ಲ. ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಬೇಕು. ರೈತರ ಬದುಕು ಹಸನಾಗಬೇಕು. ಶಿಕ್ಷಣ, ಆರೋಗ್ಯ ಸೇರಿ ಎಲ್ಲ ಕ್ಷೇತ್ರಗಳ ಅಭಿವೃದ್ಧಿಯಾಗಬೇಕು ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ತಾಲೂಕಿನ ಬಗನಕಟ್ಟೆಯಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರ ಉದ್ಘಾಟನೆ ಮಾಡಿ ಮಾತನಾಡಿದ ಅವರು, ದಶಕಗಳ ಹಿಂದೆ ಮಾಜಿ ಮುಖ್ಯಮಂತ್ರಿಯೊಬ್ಬರು ಅಧಿಕಾರದಲ್ಲಿದ್ದಾಗ ಜನ ಟಾರ್ ರಸ್ತೆ ಮಾಡಿಸಿಕೊಡಿ ಎಂದು ಕೇಳಿದಾಗ ಮಣ್ಣಿನ ರಸ್ತೆ ಇದ್ದರೆ ಏನಾಗುತ್ತೇ? ನಿಮ್ಮೂರಿಗೇನು ಕಾರುಗಳು ಓಡಾಡ್ತಾವಾ ಎಂದು ಹೇಳಿಕಳಿಸುತ್ತಿದ್ದರಂತೆ. ಆದರೆ ಯಡಿಯೂರಪ್ಪ ಅವರು ಜನತೆಯ ಆಶಯಗಳನ್ನು ಈಡೇರಿಸಿದ್ದಾರೆ ಎಂದರು.
ನೀವು ಆಯ್ಕೆ ಮಾಡಿದ ನಾಯಕ ಯಾವತ್ತೂ ನಿಮ್ಮ ಸೇವಕನಂತಿರಬೇಕು. ನಿಮ್ಮ ದನಿಯಾಗಿ ಕೆಲಸ ಮಾಡಬೇಕು. ಸ್ವಸ್ಥ ಸಮಾಜ ನಿರ್ಮಾಣ ಗುರಿಯಾಗಿರಬೇಕು. ಕರೊನಾ ಸಮಯದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ವೈದ್ಯರು, ಆಶಾ ಕಾರ್ಯಕರ್ತೆಯರು ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಡಿದರು. ಅದು ಅವರ ಸೇವೆಗೆ ಸಾಕ್ಷಿ ಎಂದು ತಿಳಿಸಿದರು.
ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಬೇರೆ ಬೇರೆ ತಾಲೂಕುಗಳಿಗಳಿಂದ ತಿಂಗಳಿಗೆ 15 ಸಾವಿರಕ್ಕೂ ಅಧಿಕ ಹೊರ ರೋಗಿಗಳು ಬರುತ್ತಾರೆ. ಶಿರಾಳಕೊಪ್ಪದಲ್ಲಿ ಐದಾರು ಸಾವಿರ ಹೊರ ರೋಗಿಗಳು ಬರುತ್ತಾರೆ. ಬಡರೋಗಿಗಳಿಗೆ ಸೇವೆ ಕೊಡುವುದೇ ಇದರ ಮೂಲ ಉದ್ದೇಶ. ಮಹಿಳೆಯರು ಮತ್ತು ಮಕ್ಕಳಿಗೆ ಈ ಆಸ್ಪತ್ರೆ ವರದಾನ. ಜನ ನಿಮ್ಮ ಮೇಲೆ ವಿಶ್ವಾಸವಿಟ್ಟು ಬರುತ್ತಾರೆ ನೀವು ಅವರಿಗೆ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಳ್ಳಿ. ಆಸ್ಪತ್ರೆಗಳು ಒಳ್ಳೆಯ ಹೆಸರು ಮಾಡುವದು ಕಟ್ಟಡಗಳಿಂದಲ್ಲ. ಅಲ್ಲಿರುವ ವೈದ್ಯರು ಮತ್ತು ಸಿಬ್ಬಂದಿಗಳಿಂದ ಎಂದು ಅಭಿಪ್ರಾಯಪಟ್ಟರು.
ತಾಲೂಕಿನ ವೈದ್ಯರಿಲ್ಲದ ಪಿಎಚ್‌ಸಿಗಳಿಗೆ ವೈದ್ಯರ ನೇಮಕವಾಗಬೇಕು. ವೈದ್ಯರು ಪ್ರತಿದಿನ ಇದ್ದರೆ ಜನರಿಗೆ ಧೈರ್ಯ ಬರುತ್ತದೆ. ವೈದ್ಯರ ಬಗ್ಗೆ ಜನರಿಂದ ದೂರುಗಳು ಬಾರದಂತೆ ಕರ್ತವ್ಯ ನಿರ್ವಹಿಸಿ. ಹಾಗೆಯೇ ಡೆಂೆ ಹರಡದಂತೆ ಮುಂಜಾಗ್ರತೆ ವಹಿಸಬೇಕು ಎಂದು ಸಲಹೆ ನೀಡಿದರು.
ಬಗನಕಟ್ಟೆ ಗ್ರಾಪಂ ಅಧ್ಯಕ್ಷೆ ಶೆಟ್ಟೆಮ್ಮ, ತಾಲೂಕು ಬಿಜೆಪಿ ಅಧ್ಯಕ್ಷ ಹನುಮಂತಪ್ಪ, ಲೋಕೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಟರಾಜ್, ಟಿಎಚ್‌ಒ ಡಾ. ನವೀದ್ ಖಾನ್, ಡಿಎಸ್‌ಒ ಡಾ. ನಾಗರಾಜ ನಾಯ್ಕ, ಆಡಳಿತ ವೈದ್ಯಾಧಿಕಾರಿ ಡಾ. ರಾಮ್‌ಕುಮಾರ್, ಬಗನಕಟ್ಟೆ ಗ್ರಾಪಂ ಸದಸ್ಯರು, ಪಿಡಿಒ, ಆರೋಗ್ಯ ಕೇಂದ್ರದ ಸಿಬ್ಬಂದಿ ಇದ್ದರು.