‘ಶ್ರೀರಾಮ ! ಪ್ರಳಯಕಾಲದಲ್ಲಿ ಸೂರ್ಯನು ಪ್ರಖರ ಕಿರಣಗಳಿಂದ ಲೋಕಗಳನ್ನು ಬೆಳಗುತ್ತಾನೆ. ಹಾಗೆಯೇ ಈ ಯುದ್ಧದಲ್ಲಿ ಪ್ರಯೋಗಿಸಲ್ಪಟ್ಟ ಪಳ ಪಳ ಹೊಳೆಯುತ್ತಿರುವ ಆಯುಧಗಳು ಮೇಲಿನಿಂದ ಬೀಳುತ್ತಿರುವುದನ್ನು ನೋಡಿದರೆ ಪ್ರಖರ ಕಿರಣಗಳು ಸೂರ್ಯನಿಂದ ಬೀಳುತ್ತಿರುವಂತೆ ಕಾಣುತ್ತಿದೆ. ಆಯುಧಗಳ ಏಟಿನಿಂದ ಘಾಸಿಗೊಂಡು ಬಿದ್ದು ವಿಲ ವಿಲ ಒದ್ದಾಡುತ್ತ ಕಠಿಣ ಪ್ರಾಣಸಂಕಟದಲ್ಲಿ ನರಳುವುದನ್ನು ನೋಡಿದರೆ ಎಲ್ಲರ ಮನಸ್ಸು ಉದ್ವಿಗ್ನಗೊಳ್ಳುತ್ತದೆ, ಎದೆ ಢವ ಢವ ಎನ್ನುತ್ತದೆ’.
‘ಪ್ರಳಯಕಾಲದಲ್ಲಿ ಪುಷ್ಕರಾವರ್ತ ಎಂಬ ಮೇಘಗಳು ನಿರಂತರ ಧಾರಾಕಾರ ಮಳೆಸುರಿಸುವಂತೆ ಈ ಯುದ್ಧದಲ್ಲಿ ಕೋದಂಡ (ಬಿಲ್ಲು)ಗಳೆಂಬ ಪುಷ್ಕರಾವರ್ತಗಳು ಬಾಣಗಳ ನಿರಂತರ ವರ್ಷಧಾರೆಗಳನ್ನು ಸುರಿಸುತ್ತಿವೆ. ಯೋಧರು ಕೈಯಲ್ಲಿ ಹಿಡಿದು ಝುಳಪಿಸುತ್ತಿರುವ ಖಡ್ಗಗಳ ಹೊಳಪುಗಳೆಂಬ ಮಿಂಚುಗಳು ಆ ಮೇಘಗಳ ಜೊತೆಗೆ ತೋರಿಕೊಳ್ಳುತ್ತಿವೆ. ಶಿಲೆಗಳ ಮೇಲೆ ತಿಕ್ಕುವ ಮೂಲಕ ಹರಿತ ಮತ್ತು ಹೊಳಪು ಮಾಡಿಕೊಂಡು ಬಂದಿರುವ ಖಡ್ಗಗಳ ಮಿಂಚು ಆಕಾಶದಲ್ಲಿ ವಲಯಾಕಾರದಲ್ಲಿ ತೋರುತ್ತಿವೆ. ಉಕ್ಕುತ್ತಿರುವ ರಕ್ತದ ಸಮುದ್ರದಲ್ಲಿ ಆನೆಗಳು ಬೀಳುತ್ತಿರುವುದನ್ನು ನೋಡಿದರೆ ಪ್ರಳಯಕಾಲದಲ್ಲಿ ಕುಲಪರ್ವತಗಳು ತಳ ಕಳಚಿ ಸಮುದ್ರದಲ್ಲಿ ಬೀಳುತ್ತಿರುವಂತೆ ಕಾಣುತ್ತಿದೆ.
ಈ ದೃಶ್ಯಕ್ಕೆ ಚಿಮ್ಮುತ್ತಿರುವ ರಕ್ತದ ಕಣಗಳು ಪ್ರಳಯಕಾಲದಲ್ಲಿ ಬೀಳುತ್ತಿರುವ ನಕ್ಷತ್ರಗಳಂತೆ ಇನ್ನಷ್ಟು ಪುಷ್ಟಿ ಒದಗಿಸಿವೆ. ಕೆಳಗಿನಿಂದ ಚಿಮ್ಮುತ್ತಿರುವ ರಕ್ತದ ಕಣಗಳ ಜೊತೆಗೆ ಮೇಲಿನಿಂದ ಬೀಳುತ್ತಿರುವ ರಕ್ತದ ಕಣಗಳು ಸೇರಿಕೊಳ್ಳುತ್ತಿರುವುದರಿಂದ ದೊಡ್ಡ ಹನಿಗಳಾಗಿ ಹೊಳೆಯುತ್ತಾ ಆ ರಕ್ತದ ಕಣಗಳು ಬೀಳುತ್ತಿವೆ. ಇದನ್ನು ನೋಡಿದರೆ ಪ್ರಳಯಕಾಲದಲ್ಲಿ ಆಕಾಶದಲ್ಲಿ ಹರಡಿಕೊಂಡಿರುವ ನಕ್ಷತ್ರಗಳು ಕೆಳಕ್ಕೆ ಬೀಳುತ್ತಿರುವಂತೆ ಕಾಣುತ್ತಿದೆ’. ‘ಯುದ್ಧದಲ್ಲಿ ಪ್ರಯೋಗಿಸಲ್ಪಡುತ್ತಿರುವ ಚಕ್ರಗಳ ಸಾಲು ಆಕಾಶದಲ್ಲಿ ಅದ್ಭುತ ದೃಶ್ಯವನ್ನು ಉಂಟುಮಾಡಿದೆ. ಎಡೆಬಿಡದೆ ಚಕ್ರಗಳು ಪ್ರಯೋಗಿಸಲ್ಪಡುತ್ತಿರುವುದರಿಂದ ಆಕಾಶದಲ್ಲಿ ಚಕ್ರಗಳ ನದಿಯೇ ಹರಿದು ಆ ನದಿಯ ಸುಳಿಗಳಿಂದ ಆಕಾಶದ ನಾಡಿಗಳು ಮತ್ತು ಮೋಡಗಳು ತುಂಬಿಹೋಗಿವೆ. ವಿವಿಧ ಅಸ್ತ್ರಗಳೆಂಬ ಪ್ರಳಯಾಗ್ನಿಯಿಂದ ಸೈನ್ಯಗಳು ಸುಟ್ಟುಹೋದ್ದರಿಂದ ಸೈನಿಕರು ಬೇರೆ ಲೋಕಗಳಿಗೆ ಹೋಗುತ್ತಿದ್ದಾರೆ’.
‘ಮಳೆಯಂತೆ ನಿರಂತರ ಸುರಿಯುತ್ತಿರುವ ಅಸ್ತ್ರ-ಶಸ್ತ್ರಗಳೆಂಬ ವಜ್ರಾಯುಧಗಳಿಂದ ಭೂಮಿ ಮತ್ತು ಪರ್ವತಗಳು ಮುಚ್ಚಿ ಹೋಗಿವೆ. ದೊಡ್ಡ ಆನೆಗಳೆಂಬ ಪರ್ವತಗಳು ಕೆಳಕ್ಕೆ ಬೀಳುವಾಗ ಅಲ್ಲಿರುವ ಜನಸಮೂಹ ಪುಡಿ ಪುಡಿಯಾಗುತ್ತಿದೆ. ಬಾಣಗಳ ಮಳೆಯಿಂದ ಆವರಿಸಲ್ಪಟ್ಟಿರುವ ಸೇನೆಗಳೆಂಬ ಮೇಘಗಳಿಂದ ಭೂಮಿಯೆಂಬ ಆಕಾಶವು ಮುಚ್ಚಿ ಹೋಗಿದೆ (ತುಂಬಿ ಹೋಗಿದೆ). ಪ್ರಳಯಕಾಲದಲ್ಲಿ ಸಮುದ್ರಗಳು ಉಕ್ಕಿ ಬೇರೆ ಸಮುದ್ರಗಳ ಜೊತೆ ಸೇರಿ ಹೋಗುವಂತೆ ದೊಡ್ಡ ಸೇನೆಗಳೆಂಬ ಸಮುದ್ರಗಳು ಕ್ಷೋಭೆಗೊಂಡು ಒಂದಕ್ಕೊಂದು ಸೇರಿಕೊಂಡು ಯುದ್ಧದ ಭರದಲ್ಲಿ ಯುದ್ಧರಂಗದ ಆಚೆ-ಈಚೆಗೂ ಸರಿದು ಹೋಗುತ್ತಿವೆ’.
‘ಪ್ರಳಯದ ಸಂವ ರ್ತೇತ್ಪಾತದ ಕಾಲದಲ್ಲಿ ಸಮುದ್ರದಲ್ಲಿ ಏಳುವ ಉಗ್ರವಾದ ಬಿರುಗಾಳಿ ಗಳಿಂದ ಸಮುದ್ರದ ಒಳಗಿನ ಬಲಿಷ್ಠವಾದ ನೀರುಹಾವುಗಳು ಹೊರಬಂದು ಸಮುದ್ರದಲ್ಲಿರುವ ಪರ್ವತಗಳನ್ನು ಮುತ್ತಿಕೊಳ್ಳು ತ್ತವೆ. ಹಾಗೆಯೇ ಒಬ್ಬರನ್ನು ಇನ್ನೊಬ್ಬರು ಆಕ್ರಮಿಸುವ ಭರದಲ್ಲಿ ರುವ ಸೈನಿಕರಿಂದ ಪ್ರಯೋಗಿಸಲ್ಪಟ್ಟ ಶಸ್ತ್ರಗಳಿಂದ ಸೇನೆಗಳು ವ್ಯಾಪಿಸಲ್ಪಟ್ಟಿದ್ದವು’. ‘ಕಲ್ಪಾಂತ್ಯದ(ಪ್ರಳಯಕಾಲದ)ಬಿರುಗಾಳಿಯಿಂದ ಎತ್ತಿ ಎಸೆಯ ಲ್ಪಟ್ಟ ಮರಗಳು, ಕಲ್ಲುಗಳು ಮುಂತಾದ ಪದಾರ್ಥಗಳು ಶಸ್ತ್ರಗಳಂತೆ ಸಿಕ್ಕ ಸಿಕ್ಕ ಮನುಷ್ಯ, ಪ್ರಾಣಿ ಮುಂತಾದವುಗಳನ್ನು ನಾಶಪಡಿಸುತ್ತಾ ಸಾಗುತ್ತವೆ. ಹಾಗೆಯೇ ಯುದ್ಧರಂಗದಲ್ಲಿ ಸೈನಿಕರು ಆವೇಶದಿಂದ ಪ್ರಯೋಗಿಸಿರುವ ಶೂಲ, ಖಡ್ಗ, ಚಕ್ರ, ಬಾಣ, ಶಕ್ತಿ, ಗಧೆ, ಭುಶುಂಡಿ, ಪ್ರಾಸ ಮುಂತಾದ ಆಯುಧಗಳು ಒಂದು ಇನ್ನೊಂದನ್ನು ಸೀಳುತ್ತಾ ಶಬ್ದ ಮಾಡುತ್ತಾ ಬೆಳಕನ್ನುಂಟುಮಾಡುತ್ತಾ ವಿಜೃಂಭಿಸುತ್ತಿವೆ’.
ಇಲ್ಲಿ ಮೂವತ್ತೈದನೇಯ ಸರ್ಗ ಮುಗಿದು ಮೂವತ್ತಾರನೇಯ ಸರ್ಗದಲ್ಲಿ ಶ್ರೀ ವಸಿಷ್ಠರು ದ್ವಂದ್ವಯುದ್ಧ ಮತ್ತು ವಿವಿಧ ರಾಜರುಗಳ ಸಹಾಯಗಳ ಮೂಲಕ ಯುದ್ಧವನ್ನು ವರ್ಣಿಸುತ್ತಿದ್ದಾರೆ. ‘ಶ್ರೀರಾಮ! ಈಗ ಯುದ್ಧರಂಗದ ಸ್ಥಿತಿ ಸಾಕಷ್ಟು ಬದಲಾಗಿದೆ. ಬಾಣಗಳ ರಾಶಿಗಳು ಗುಡ್ಡಗಳಂತೆ ಬಿದ್ದಿವೆ. ವೀರರಲ್ಲದ ಯೋಧರು ಅನೇಕರು ಈಗಾಗಲೇ ಪ್ರಾಣತೆತ್ತಿದ್ದಾರೆ ಮತ್ತು ಬೇರೆ ಬೇರೆ ದಿಕ್ಕುಗಳಲ್ಲಿ ಓಡಿಹೋಗಿದ್ದಾರೆ. ಮರಣ ಹೊಂದಿದ ಪರ್ವತಗಳಂತಿರುವ ಆನೆಗಳ ಶರೀರದ ಮೇಲೆ ಮೋಡಗಳ ಸಾಲು ವಿಶ್ರಾಮಗೊಂಡಿವೆ. ಸೈನಿಕರ ಸಂಖ್ಯೆ ಕಡಿಮೆಯಾಗಿದ್ದರಿಂದ ರಕ್ತದ ಮಡುಗಳಲ್ಲಿ ಯಕ್ಷ, ರಾಕ್ಷಸ, ಪಿಶಾಚಗಳು ಕ್ರೀಡೆಯಾಡುತ್ತಿರುವುದು ಗೋಚರಿಸುತ್ತಿದೆ.
ಇಂತಹ ಸಂದರ್ಭದಲ್ಲಿ ಸಮಾನವಾದ ಆಯುಧಗಳನ್ನು ಧರಿಸಿದ ವೀರರಲ್ಲಿ ದ್ವಂದ್ವಯುದ್ಧಗಳು ಪ್ರಾರಂಭವಾದವು. ಈ ದ್ವಂದ್ವ ಯುದ್ಧದಲ್ಲಿ ತೊಡಗಿರುವ ಕ್ಷತ್ರಿಯರು ಮಹಾತ್ಮರೂ, ಧರ್ಮನಿಷ್ಠರೂ, ಶೀಲ- ಓಜಸ್ಸು- ಸತ್ವಗಳಿಂದ ಕೂಡಿದವರೂ ಆಗಿದ್ದರು. ಅಲ್ಲದೇ ವಂಶಶುದ್ಧಿಯಿಂದ ಕೂಡಿದ ಇವರು ಕ್ಷತ್ರಿಯವಂಶಕ್ಕೆ ಕಮಲಗಳಂತೆ ಶೋಭೆಯನ್ನು ಉಂಟು ಮಾಡುವವರಾಗಿದ್ದರು. ಕಮಲಗಳು ತಮ್ಮ ಪರಿಮಳದಿಂದ ಸುತ್ತಲಿನ ವಾತಾವರಣವನ್ನು ವ್ಯಾಪಿಸುವಂತೆ ತಮ್ಮ ಯಶಸ್ಸಿನ ಮೂಲಕ ಸುತ್ತಲಿನ ಪ್ರದೇಶಗಳಲ್ಲಿ ಪ್ರಸಿದ್ಧರಾಗಿರುವವರಾಗಿದ್ದರು. ಯುದ್ಧದಲ್ಲಿ ಎಂದಿಗೂ ಬೆನ್ನು ತೋರಿಸಿ ಹಿಂದೆ ಓಡುವ ಸ್ವಭಾವವಿ ಲ್ಲದ ವೀರರಾಗಿದ್ದರು’.
(ಇಲ್ಲಿ ಶೀಲ ಎಂದರೆ ಒಳ್ಳೆಯ ಚಾರಿತ್ರ್ಯ. ಓಜಸ್ಸು ಎಂದರೆ ಬ್ರಹ್ಮಚರ್ಯಾದಿ ಧರ್ಮಪಾಲನೆಯಿಂದ ಬಂದ ಅಂತಃಕರಣದ ಬಲ. ಸತ್ವ ಎಂದರೆ ಶಾರೀರಿಕ ಬಲ.)