ನ್ಯೂಸ್

ಸರ್ಕಾರಿ ಜಮೀನು ಕಬಳಿಸಲು ಜಿಲ್ಲಾಧಿಕಾರಿ ಸಹಿಯನ್ನೇ ನಕಲು ಮಾಡಿದ ಭೂಕಳ್ಳರು! ಎಚ್ಚೆತ್ತ ತಹಸೀಲ್ದಾರ್, ತಪ್ಪಿತು ಭಾರೀ ಅಕ್ರಮ

ಕೋಲಾರ: ಸರ್ಕಾರಿ ಭೂಮಿ ಕಬಳಿಸಲು ಹೊಂಚು ಹಾಕಿದ ಖತರ್ನಾಕ್​ ಕಳ್ಳರು ಕೋಲಾರ ಜಿಲ್ಲಾಧಿಕಾರಿ ಅವರ ಸಹಿಯನ್ನೇ ನಕಲು ಮಾಡಿ ಸರ್ಕಾರಿ ಖರಾಬು ಕಟ್ಟೆ ಜಮೀನನ್ನು ಕಾರ್ಖಾನೆಗಾಗಿ ಲಪಟಾಯಿಸಲು ಯತ್ನಿಸಿರುವುದು ಬೆಳಕಿಗೆ ಬಂದಿದೆ.

ಕೋಲಾರ ತಾಲೂಕಿನ ಆಲಹಳ್ಳಿಯ ಸರ್ವೇ ನಂ.127ರಲ್ಲಿ 3 ಎಕರೆ 23 ಗುಂಟೆ ಸರ್ಕಾರಿ ಖರಾಬು ಕಟ್ಟೆ ಜಮೀನಿದೆ. ಇದನ್ನು ಮಧ್ಯವರ್ತಿಗಳು ಮತ್ತು ತಾಲೂಕು ಕಚೇರಿ ಸಿಬ್ಬಂದಿ ಸೇರಿ ಕಬಳಿಸಿ ಸನ್​ಲಾರ್ಜ್​ ಪ್ರೈವೇಟ್​ ಲಿಮಿಟೆಡ್​ ಕಾರ್ಖಾನೆಗೆ ಹಸ್ತಾಂತರಿಸಲು ಯತ್ನಿಸಲಾಗಿದೆ. ಜಮೀನು ಮಂಜೂರು ಮಾಡುವ ಹಂತದಲ್ಲಿ ತಹಸೀಲ್ದಾರ್​ ನಾಗರಾಜ್​ ಅವರು ಜಿಲ್ಲಾಧಿಕಾರಿ ಅವರ ಸಹಿ ನಕಲಿ ಎಂಬುದನ್ನು ಪತ್ತೆ ಮಾಡಿದ್ದರಿಂದ, ಪ್ರಕರಣ ಬಹಿರಂಗವಾಗಿದೆ.

ಆಲಹಳ್ಳಿಯಲ್ಲಿ 15 ಎಕರೆ ಜಮೀನನ್ನು ರೈತರಿಂದ ಖರೀದಿಸಿರುವ ಸನ್​ಲಾರ್ಜ್​ ಕಾರ್ಖಾನೆ ತನ್ನ ಘಟಕ ಸ್ಥಾಪಿಸಿದೆ. ಆದರೆ ಈ ಜಮೀನಿನ ಮಧ್ಯೆ ಸರ್ಕಾರಿ ಖರಾಬು ಕಟ್ಟೆ ಜಮೀನಿದ್ದು, ಇದು ಲ್ಯಾಂಡ್​ ಲಾಕ್ಡ್​ ಜಮೀನಾಗಿದೆ. ಈ ಜಾಗವನ್ನು ತಮಗೆ ಕೊಡುವಂತೆ ಕಾರ್ಖಾನೆ ಆಡಳಿತ ಮಂಡಳಿ ಸಲ್ಲಿಸಿದ್ದ ಕಾರ್ಖಾನೆಯ ಮನವಿಯನ್ನು ಈ ಹಿಂದಿನ ಜಿಲ್ಲಾಧಿಕಾರಿ ಸೆಲ್ವಮಣಿ ತಿರಸ್ಕರಿಸಿದ್ದರು. ಆದರೆ ಕಾರ್ಖಾನೆ ಮತ್ತೆ ಮನವಿ ಮಾಡಿಕೊಂಡಾಗ ಸರ್ವೇ ಅಧಿಕಾರಿಗಳಿಂದ ಸರ್ವೇ ಮಾಡಿಸಿ, ವರದಿ ತರಿಸಿಕೊಂಡು ಪರಿಶೀಲಿಸಿ ಮನವಿ ತಿರಸ್ಕರಿಸಲಾಗಿದೆ ಎಂದು ತಾಲೂಕು ಕಚೇರಿಗೆ ಪತ್ರ ಸಂಖ್ಯೆ 69/22ರಲ್ಲಿ ಸೆಲ್ವಮಣಿ ತಿಳಿಸಿದ್ದರು.

ಆದರೆ ಜಿಲ್ಲಾಧಿಕಾರಿ ವೆಂಕಟ್​ರಾಜಾ ಅವರು ಬಂದ ನಂತರ ಜಮೀನು ಮಂಜೂರು ಮಾಡಲು ಪರಿಶೀಲಿಸಿದ ರೀತಿಯಲ್ಲಿ ಪತ್ರ ತಯಾರಿಸಿ, ಜಿಲ್ಲಾಧಿಕಾರಿ ಅವರ ನಕಲಿ ಸಹಿ ಹಾಕಿ ಫೆಬ್ರವರಿಯಲ್ಲಿ ತಹಸೀಲ್ದಾರ್​ ಅವರಿಗೆ ಕಡತವನ್ನು ಸಲ್ಲಿಸಲಾಗಿತ್ತು. ಕಡತ ಪರಿಶೀಲಿಸಿದ ತಹಸೀಲ್ದಾರ್​ ನಾಗರಾಜ್​ ಅವರಿಗೆ ಜಿಲ್ಲಾಧಿಕಾರಿಯ ಸಹಿ ಬಗ್ಗೆ ಅನುಮಾನ ಮೂಡಿತ್ತು. ತಕ್ಷಣವೇ ಅವರು ಈ ವಿಷಯವನ್ನು ಜಿಲ್ಲಾಧಿಕಾರಿ ವೆಂಕಟ್​ರಾಜಾ ಮತ್ತು ಎಸ್​ಪಿ ಡಿ. ದೇವರಾಜ ಅವರ ಗಮನಕ್ಕೆ ತಂದರು ಎನ್ನಲಾಗಿದೆ.