ನ್ಯೂಸ್

ಇಂದು ಉಡುಪಿ ಶ್ರೀಕೃಷ್ಣ ಮಠದಲ್ಲಿ ಲಕ್ಷದಿಪೋತ್ಸವ: ರಥೋತ್ಸವಕ್ಕೆ ಕ್ಷಣಗಣನೆ

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಉತ್ಥಾನದ್ವಾದಶಿ ದಿನ ಪ್ರಯುಕ್ತ ಇಂದು (ನ.16) ಲಕ್ಷದಿಪೋತ್ಸವದೊಂದಿಗೆ ರಥೋತ್ಸವ ನಡೆಯಲಿದೆ.

ಈಗಾಗಲೇ ರಥಬೀದಿಯಲ್ಲಿ ರಥಗಳನ್ನು ಅಲಂಕರಿಸಲಾಗಿದ್ದು, 300ಕ್ಕೂ ಅಧಿಕ ಸಾಲುದೀಪಗಳು, 30 ಸಾವಿರ ಹಣತೆಗಳನ್ನು ಜೋಡಿಸಲಾಗಿದೆ. ಇಂದು ಬೆಳಗ್ಗೆ ಪರ್ಯಾಯ ಪಲಿಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಮಠದ ಪ್ರಾಂಗಣದಲ್ಲಿರುವ ತುಳಸಿ ಕಟ್ಟೆಯಲ್ಲಿ ತುಳಸಿ ಪೂಜೆ ನೆರವೇರಿಸಿದರು. ಮಧ್ಯಾಹ್ನ 3 ಗಂಟೆಗೆ ವಿವಿಧ ಮಠಾಧೀಶರು ಹಣತೆ ಮುಹೂರ್ತ ನೆರವೇರಿಸಲಿದ್ದಾರೆ.

ಇಂದು ಸಾಯಂಕಾಲ ಮಧ್ವ ಸರೋವರದ ಮಧ್ಯದಲ್ಲಿರುವ ಮಧ್ವಮಂಟಪದಲ್ಲಿ ಕ್ಷೀರಾಬ್ಧಿ ಪೂಜೆ ನೆರವೇರಲಿದೆ. ತುಳಸಿ ಮತ್ತು ನೆಲ್ಲಿಗಿಡದ ಬುಡದಲ್ಲಿಟ್ಟಿರುವ ತೆಂಗಿನ ಹೋಳಿನಲ್ಲಿ ಕ್ಷೀರಾಬ್ಧಿ ಅರ್ಘ್ಯ ಪ್ರದಾನ ಮಾಡಿ ಚಾತುರ್ಮಾಸ್ಯದ ವ್ರತವನ್ನು ದೇವರಿಗೆ ಸಮರ್ಪಿಸಲಿದ್ದಾರೆ. ರಾತ್ರಿ ಮಠದಲ್ಲಿ ಉತ್ಸವ ಮುಹೂರ್ತ ಧಾರ್ಮಿಕ ವಿಧಿ, ನವಗ್ರಹ ಪೂಜೆ, ನವಗ್ರಹ ದಾನದ ನಂತರ ರಥೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.