ನ್ಯೂಸ್

ಜೋಗ ಜಲಪಾತದ ಸೌಂದರ್ಯ ಕಣ್ತುಂಬಿಕೊಂಡ ರಾಜ್ಯಪಾಲ

ಶಿವಮೊಗ್ಗ​: ರಾಜ್ಯಪಾಲ ಥಾವರಚಂದ್​ ಗೆಹಲೋತ್​ ಗುರುವಾರ ವಿಶ್ವ ವಿಖ್ಯಾತ ಜೋಗ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಂಡರು. ಜಲಪಾತ ಧುಮ್ಮಿಕ್ಕುವ ವೈಭವವನ್ನು ರಾಜಾಟಾಪ್​ನಲ್ಲಿ ನಿಂತು ನೋಡುತ್ತಾ ಫೋಟೋ ತೆಗೆಸಿಕೊಂಡರು. ಜೋಗ ಜಲಪಾತ, ಶರಾವತಿ ಕಣಿವೆ ಬಗ್ಗೆ ಮಾಹಿತಿ ಪಡೆದುಕೊಂಡರು.

ಶಿವಮೊಗ್ಗ ಜಿಲ್ಲೆ ಪ್ರವಾಸದಲ್ಲಿರುವ ರಾಜ್ಯಪಾಲರು ಬುಧವಾರ ಜೋಗ ಜಲಪಾತದ ರಾಜಾಟಾಪ್​ ಸಮೀಪದ ಬ್ರೀಟಿಷ್​ ಬಂಗಲೆಯಲ್ಲಿ ವಾಸ್ತವ್ಯ ಹೂಡಿದ್ದರು. ಗುರುವಾರ ಬೆಳಗ್ಗೆ 8 ಗಂಟೆಗೆ ಜಲಪಾತ ವೀಕ್ಷಣೆಗೆ ಆಗಮಿಸಿದ ಅವರು 10 ನಿಮಿಷ ಜೋಗದ ಸೌಂದರ್ಯವನ್ನು ಸವಿದರು.

ರಾಜ್ಯಪಾಲರು ಜಲಪಾತ ವೀಕ್ಷಿಸುತ್ತಾರೆ ಎಂಬ ಕಾರಣಕ್ಕಾಗಿ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಿಸಲು ಮುಂಜಾನೆ 5 ಗಂಟೆಗೆ ಲಿಂಗನಮಕ್ಕಿ ಡ್ಯಾಂನಿಂದ ನೀರು ಹೊರಕ್ಕೆ ಬಿಡಲಾಗಿತ್ತು. ಆದರೆ, ಜಲಾಶಯದಿಂದ ನೀರು ಜಲಪಾತಕ್ಕೆ ಬರುವುದರೊಳಗಾಗಿ ರಾಜ್ಯಪಾಲರು ಜಲಪಾತ ವೀಕ್ಷಿಸಿ ಅಲ್ಲಿಂದ ಹೊರಟು ಹೋಗಿದ್ದರು. ಹೀಗಾಗಿ ರಾಜ್ಯಪಾಲರಿಗೆ ಜಲಪಾತದ ರಮಣೀಯ ದೃಶ್ಯ ಸವಿಯಲು ಸಾಧ್ಯವಾಗಲಿಲ್ಲ.

ಬುಧವಾರ ಪೆಸಿಟ್ ಕಾಲೇಜು ಹಾಗೂ ಶಿವಮೊಗ್ಗದ ಹುಲಿ-ಸಿಂಹಧಾಮಕ್ಕೆ ರಾಜ್ಯಪಾಲರು ಭೇಟಿ ನೀಡಿದ್ದರು. ರಾಜ್ಯಪಾಲರಿಗೆ ಜೋಗ ಜಲಪಾತ ಕುರಿತು ಉತ್ತರ ಕನ್ನಡ ಡಿಸಿ ಮುಲ್ಲೈ ಮುಹಿಲನ್, ಎಸ್ಪಿ ಡಾ. ಸುಮನ್ ಡಿ ಪನ್ನೇಕರ್, ಕುಮುಟಾ ಎಸಿ ರಾಹುಲ್ ಪಾಂಡೆ ಅವರು ಮಾಹಿತಿ ನೀಡಿದರು.