ನ್ಯೂಸ್

ದಾರಿ ತಪ್ಪಿದ ಮಗ, ಬಬ್ರುವಾಹನ, ಸಾರಥಿ.. ಸಿನಿಮಾ ನಿರ್ಮಾಪಕ ಕೆಸಿಎನ್​ ಚಂದ್ರಶೇಖರ್​ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆಸಿಎನ್​ ಚಂದ್ರಶೇಖರ್​(69) ಅವರು ಭಾನುವಾರ ರಾತ್ರಿ ಅನಾರೋಗ್ಯದಿಂದ ನಿಧನರಾದರು. ಸಿನಿಮಾ ನಿರ್ಮಾಪಕ, ವಿತರಕ, ಪ್ರದರ್ಶಕ ಕೆಸಿಎನ್​ ಗೌಡ ಅವರ ಪುತ್ರ ಕೆಸಿಎನ್​ ಚಂದ್ರಶೇಖರ್​. ಚಿಕ್ಕಬಳ್ಳಾಪುರ ಮೂಲದ ಚಂದ್ರಶೇಖರ್​ ಅವರಿಗೆ ಇತ್ತೀಚಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಹುಅಂಗಾಂಗ ವೈಫಲ್ಯದಿಂದ ಕೊನೆಯುಸಿರೆಳೆದಿದ್ದಾರೆ.

ಡಾ.ರಾಜ್​ಕುಮಾರ್​ ಅಭಿನಯದ 'ದಾರಿ ತಪ್ಪಿದ ಮಗ' ಸಿನಿಮಾಗೆ ಸಹ ನಿರ್ಮಾಪಕರಾಗಿ ಚಂದನವನಕ್ಕೆ ಕಾಲಿಟ್ಟ ಕೆಸಿಎನ್​ ಚಂದ್ರಶೇಖರ್​ ಅವರು 'ಬಬ್ರುವಾಹನ', 'ಹುಲಿ ಹಾಲಿನ ಮೇವು', 'ಜಯಸಿಂಹ', 'ನಮ್ಮೂರ ರಾಜ', 'ಆಹುತಿ', ಸುದೀಪ್​ ಅಭಿನಯದ 'ನಲ್ಲ', ದರ್ಶನ್​ ಅಭಿನಯದ 25ನೇ ಚಿತ್ರ 'ಭೂಪತಿ', 'ಸಾರಥಿ' ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಸಾರಥಿ ಸಿನಿಮಾವೇ ಇವರು ನಿರ್ಮಾಪಕರಾಗಿ ಕೆಲಸ ಮಾಡಿದ್ದ ಕೊನೆಯ ಚಿತ್ರ. ಕನ್ನಡ ಮಾತ್ರವಲ್ಲ, ತೆಲುಗು, ಬಂಗಾಳಿ ಸಿನಿಮಾಗಳನ್ನೂ ನಿರ್ಮಿಸಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದ ಕೆಸಿಎನ್​ ಚಂದ್ರಶೇಖರ್​, ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲೂ ತೊಡಗಿಸಿಕೊಂಡಿದ್ದರು. ಫಿಲಂ ಫೆಡರೇಷನ್​ ಆಫ್​ ಇಂಡಿಯಾದಲ್ಲೂ ಕೆಲಸ ಮಾಡಿದ್ದರು. ಸೆನ್ಸಾರ್​ ಬೋರ್ಡ್​ನ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು.