ಹುಣಸೂರು ನಗರದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಮೆರವಣಿಗೆಗೆ ಗಣ್ಯರು ಚಾಲನೆ ನೀಡಿದರು. ನಗರಸಭಾಧ್ಯಕ್ಷ ಎಸ್.ಶರವಣ, ಕೃಷ್ಣರಾಜ ಗುಪ್ತ, ತಹಸೀಲ್ದಾರ್ ಮಂಜುನಾಥ್, ಕೆ.ಮಾನಸ, ದೇವನಾಯ್ಕ, ಕೃಷ್ಣನಾಯಕ, ಪುಟ್ಟರಾಜು ಇತರರಿದ್ದಾರೆ. 
ನ್ಯೂಸ್

ಹುಣಸೂರಲ್ಲಿ ಮೇಳೈಸಿತು ಕನ್ನಡ ಹಬ್ಬ

ಪರಂಪರೆ ಸಾರಿದ ಕಲಾತಂಡಗಳು.  ಗಮನ ಸೆಳೆದ ಸ್ಥಬ್ಧಚಿತ್ರಗಳು

ಹುಣಸೂರು : ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜನೆಗೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಕನ್ನಡ ನಾಡು ನುಡಿ ಪರಂಪರೆಯನ್ನು ಬಿಂಬಿಸುವಲ್ಲಿ ಯಶಸ್ವಿಯಾಯಿತು.

ಒಂದೆಡೆ ಕಲಾತಂಡಗಳ ಮೇಳೈಸುವಿಕೆಯಾದರೆ, ಮತ್ತೊಂದೆಡೆ ಕನ್ನಡಭಾಷೆಯ ಉಳಿವು ಬೆಳವಣಿಗೆಗೆ ತಮ್ಮದೇ ಆದ ರೀತಿಯಲ್ಲಿ ಕಾಣಿಕೆ ನೀಡುತ್ತಿರುವ ಆಟೋ, ಟ್ಯಾಕ್ಸಿ ಚಾಲಕರು, ಮಾಲೀಕರ ಸಂಘದ ಸದಸ್ಯರು ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಕಲಾಪ್ರದರ್ಶನದೊಂದಿಗೆ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಶುಕ್ರವಾರ ಬೆಳಗ್ಗೆ 9 ಗಂಟೆಗೆ ಶಾಸಕ ಜಿ.ಡಿ.ಹರೀಶ್‌ಗೌಡ ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ನಾಡಧ್ವಜವನ್ನು ಆರೋಹಣ ಮಾಡುವ ಮೂಲಕ ರಾಜ್ಯೋತ್ಸವ ಸಂಭ್ರಮಕ್ಕೆ ಚಾಲನೆ ನೀಡಿದರು. ಉಪವಿಭಾಗಾಧಿಕಾರಿ ಎಚ್.ಬಿ.ವಿಜಯಕುಮಾರ್ ಧ್ವಜಾರೋಹಣ ನೆರವೇರಿಸಿದರು. ಶಾಲಾ ಮಕ್ಕಳು, ಪೊಲೀಸ್ ಸಿಬ್ಬಂದಿ ಪಥಸಂಚಲನ ನಡೆಸಿ ಗಣ್ಯರಿಗೆ ಧ್ವಜವಂದನೆ ಸಲ್ಲಿಸಿದರು.

ಆಕರ್ಷಕ ಮೆರವಣಿಗೆ : ನಗರದ ಕಲ್ಕುಣಿಕೆ ರಂಗನಾಥ ಬಡಾವಣೆಯಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ನಗರಸಭಾಧ್ಯಕ್ಷ ಎಸ್.ಶರವಣ ರಾಜ್ಯೋತ್ಸವ ಮೆರವಣಿಗೆಗೆ ಚಾಲನೆ ನೀಡಿದರು. ಬೆಳ್ಳಿ ರಥದಲ್ಲಿ ತಾಯಿ ಭುವನೇಶ್ವರಿದೇವಿಯ ಭವ್ಯ ಮೂರ್ತಿಗೆ ಅರ್ಚಕರು ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ಆರಂಭಗೊಂಡಿತು. ನಗರಸಭಾಧ್ಯಕ್ಷ ಎಸ್.ಶರವಣ, ಸದಸ್ಯರಾದ ಕೃಷ್ಣರಾಜ ಗುಪ್ತ, ರಮೇಶ್, ದೇವನಾಯ್ಕ, ಕಸಾಪ ಅಧ್ಯಕ್ಷ ಮಹದೇವ್, ತಹಸೀಲ್ದಾರ್ ಜೆ.ಮಂಜುನಾಥ್, ಪೌರಾಯುಕ್ತೆ ಕೆ.ಮಾನಸ, ಕನ್ನಡ ಪರ ಸಂಘಟನೆಗಳ ಮುಂಖಡರು, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಜಯರಾಂ, ಪಿ.ಆರ್.ರಾಚಪ್ಪ ಇತರರು ಇದ್ದರು.

ಮೆರವಣಿಗೆಯಲ್ಲಿ ಕಲ್ಕುಣಿಕೆ ಹಿರಿಯ ಪ್ರಾಥಮಿಕಶಾಲೆಯ ಮಕ್ಕಳ ಬ್ಯಾಂಡ್‌ಸೆಟ್ ವಾದನ, ಪ್ರೌಢಶಾಲೆ, ಮತ್ತು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅರಣ್ಯ ಇಲಾಖೆಯ ಪರಿಸರ ಉಳಿಸುವ ಕುರಿತ ಸ್ತಬ್ಧಚಿತ್ರ, ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ನರೇಗಾ, ಸ್ವಚ್ಛತಾ ಅಭಿಯಾನ, ಕೂಸಿನ ಮನೆ ಮುಂತಾದ 40ಕ್ಕೂ ಹೆಚ್ಚು ಯೋಜನೆಗಳ ಸಾಂವಿಧಾನಿಕ ಸವಲತ್ತುಗಳ ಕುರಿತಾದ ಮಾಹಿತಿ ನೀಡುವ ಸ್ತಬ್ಧಚಿತ್ರ ಮತ್ತು ಎಸ್ಸಿ,ಎಸ್ಟಿ ಇಲಾಖೆಗಳ ಜಂಟಿ ಆಶ್ರಯದಲ್ಲಿ ಸಮಾನತೆಯ ಹರಿಕಾರ ಶೀರ್ಷಿಕೆಯಡಿ ಅಂಬೇಡ್ಕರ್, ದೇವರಾಜ ಅರಸುರ ಯೋಜನೆಗಳು, ಯೋಚನೆಗಳನ್ನು ತಿಳಿಸುವ ಸ್ತಬ್ಧ ಚಿತ್ರ ಎಲ್ಲರ ಗಮನಸೆಳೆಯಿತು.

ಕಲಾತಂಡಗಳ ಕಲರವ: ಸ್ಥಳೀಯ ಜಾನಪದ ಕಲಾತಂಡಗಳ ಭಾಗವಹಿಸುವಿಕೆ ಮೆರವಣಿಗೆಯ ಮೆರುಗನ್ನು ಮತ್ತಷ್ಟು ಹೆಚ್ಚಿಸಿತು. ತಾಲೂಕಿನ ವಿನೋಬಾ ಕಾಲನಿಯ ಶ್ರೀರಾಮ ಜಾನಪದ ನೃತ್ಯ ಫಲಕ ಕುಣಿತ ತಂಡದ ಯುವಕರಿಂದ ಗೆಜ್ಜೆ ಕುಣಿತ ನೋಡುಗರ ಮನಸೆಳೆಯುವಲ್ಲಿ ಯಶಸ್ವಿಯಾಯಿತು. ಎಚ್.ಡಿ.ಕೋಟೆಯ ಬಸವಣ್ಣ ಮತ್ತವರ ತಂಡದ ವೀರಗಾಸೆ ಕುಣಿತ, ಮೈಸೂರಿನ ಮುತ್ತಪ್ಪನ್ ತಂಡದ ಚಂಡೆವಾದನ, ಗಾವಡಗೆರೆಯ ರಮ್ಯ ಮತ್ತು ತಂಡದ ಡೊಳ್ಳುಕುಣಿತ, ನಗರದ ಪೌರಕಾರ್ಮಿಕರ ಕಾಲನಿಯ ಮೋಹನ್ ಮತ್ತವರ ತಂಡ ನಗಾರಿ ಮತ್ತು ಡೋಲುಕುಣಿತ, ಕಿಂಗ್ ಅಕಾಡೆಮಿ ಮಕ್ಕಳ ಸ್ಕೇಟಿಂಗ್ ಪ್ರದರ್ಶನ ಹೀಗೆ ತರಹೇವಾರಿ ಜಾನಪದ ಕಲಾತಂಡಗಳು ನೋಡುಗರ ಮನಸೆಳೆದವು.

ಕಲ್ಕುಣಿಕೆಯ ದೊಡ್ಡಯ್ಯ, ಕುಮಾರ ಮತ್ತು ನರಸಯ್ಯರ ಜೋಡೆತ್ತುಗಳು ಮೆರವಣಿಗೆಯನ್ನು ಚೆಂದಗಾಣಿಸಿದವು.

ವೃತ್ತಗಳಲ್ಲಿ ಅಲಂಕಾರ; ನಗರದ ಎಚ್.ಡಿ.ಕೋಟೆ ವೃತ್ತ, ವಿಶ್ವೇಶ್ವರಯ್ಯ ವೃತ್ತ, ಮಾರುತಿ ಪೆಟ್ರೋಲ್ ಬಂಕ್ ವೃತ್ತ, ಬಸ್ ನಿಲ್ದಾಣಗಳ ಮುಂಭಾಗ, ಅಕ್ಷಯ ಭಂಡಾರ್ ಮುಂಭಾಗ ಮತ್ತಿತರ ಪ್ರಮುಖ ಸ್ಥಳಗಳಲ್ಲಿ ಆಟೋ ಚಾಲಕರು ಕನ್ನಡಾಂಬೆಯ ಆರಾಧನೆ ನಡೆಸಿದರು. ವಿಶ್ವೇಶ್ವರಯ್ಯ ವೃತ್ತದಲ್ಲಿ ದಸರಾ ಜಂಬೂಸವಾರಿ, ಶಂಖ,ಚಕ್ರ,ಗದೆ ಮುಂತಾದವುಗಳೊಂದಿಗೆ ರಾರಾಜಿಸಿದ ತಾಯಿ ಭುವನೇಶ್ವರಿ, ಹಿಮಾಲಯದ ತಪ್ಪಲಿನಲ್ಲಿ ಧ್ಯಾನಾಸಕ್ತ ಶಿವ ಆಕರ್ಷಕವಾಗಿತ್ತು. ಮಾರುತಿ ಪೆಟ್ರೋಲ್ ಬಂಕ್ ಬಳಿಯ ಶ್ರೀ ಮಂಜುನಾಥ ಆಟೋ ನಿಲ್ದಾಣದ ಸದಸ್ಯರು ತಾಯಿ ಭುವನೇಶ್ವರಿ ದೇವಿಯ ಗುಡಿಯನ್ನು ಮೈಸೂರು ಅರಮನೆಯ ದರ್ಬಾರ್ ಹಾಲ್‌ನಂತೆ ರೂಪುಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಎಚ್.ಡಿ.ಕೋಟೆ ವೃತ್ತದಲ್ಲಿ ಜಲಪಾತದ ನಡುವೆ ಭುವನೇಶ್ವರಿ ತಾಯಿ ಕಂಗೊಳಿಸಿದಳು.