ನ್ಯೂಸ್

ಕನಕದಾಸರ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದ ದಿನ ಇದು: ಸಿಎಂ ಬೊಮ್ಮಾಯಿ

ಬೆಂಗಳೂರು: ಕನಕದಾಸರ ತ್ರಿಪದಿಗಳು, ಸಾಹಿತ್ಯ, ತತ್ವಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಂಕಲ್ಪ ಮಾಡುವ ದಿನ ಇದು. ದಾಸರಲ್ಲಿ ಅತ್ಯಂತ ಶ್ರೇಷ್ಠ ದಾಸರು ಕನಕದಾಸರು. ಇವರು ದಾಸ ಸಾಹಿತ್ಯಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ ತತ್ವಜ್ಞಾನಿ ಹಾಗೂ ಸಮಾಜ ಸುಧಾರಕರು. ವಿಶ್ವ ಮಾನವ ಕಲ್ಪನೆ ಹೊಂದಿದ್ದ ಮಾನವೀಯ ಗುಣಗಳನ್ನು ಪ್ರತಿಪಾದಿಸಿ, ಸಮಾನತೆ ಸಾರಿದವರು ಎಂದು ಸಿಎಂ ಬಸವರಾಜ ಬೊಮ್ಮಾಯಿ ಗುಣಗಾನ ಮಾಡಿದರು.

ಕನಕದಾಸ ಜಯಂತಿ ಪ್ರಯುಕ್ತ ಸೋಮವಾರ ಶಾಸಕರ ಭವನದ ಆವರಣದಲ್ಲಿ ಕನಕದಾಸರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಸಿಎಂ, ಶಿಗ್ಗಾವಿಯಲ್ಲಿ ಹುಟ್ಟಿದರೂ ಕನಕದಾಸರ ಕರ್ಮಭೂಮಿ ಕಾಗಿನೆಲೆ. ದಾಸ ಪದ ಹಾಡಿ ಜೀವನದ ಸಾರವನ್ನು ತಿಳಿಸಿದರು. ಕುಲ ಕುಲ ಕುಲವೆಂದು ಬಡಿದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ? ಎಂದು ಮಾರ್ಮಿಕವಾಗಿ ತಿಳಿಸಿದರು. ಅವರು ರಚಿಸಿದ ರಾಮಧಾನ್ಯಚರಿತಾ ಸೇರಿದಂತೆ ಹಲವಾರು ಸಾಹಿತ್ಯಗಳು ನಮಗೆ ದಾರಿದೀಪ. ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ. ಅವುಗಳ ಮೂಲಕ ಸಮಾಜದಲ್ಲಿ ಶಾಂತಿ, ಸಮಾನತೆ, ಪ್ರಗತಿ ಸಾಧಿಸಲು ಸಾಧ್ಯವಿದೆ. ಪರಿವರ್ತನೆಯ ಹರಿಕಾರರು, ರಾಜಸತ್ವವನ್ನು ಬಿಟ್ಟು ದಾಸಶ್ರೇಷ್ಠರಾಗಿದ್ದಾರೆ ಎಂದರು.

ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ: ಸಂತರ ವಿಚಾರಧಾರೆಗಳನ್ನು ಜನರಿಗೆ ತಲುಪಿಸಲು ಕಾಗಿನೆಲೆಯಲ್ಲಿ ಅರಮನೆ, ಸ್ಮಾರಕ ನಿರ್ಮಿಸಲಾಗಿದೆ. ಇದೇ ವೈಚಾರಿಕತೆಗೆ ಸೇರಿದ ಸಂಗೊಳ್ಳಿ ರಾಯಣ್ಣನ ಸಮಾಧಿ ಹಾಗೂ ಮ್ಯೂಸಿಯಂ ನಿರ್ಮಿಸಲಾಗುತ್ತಿದೆ. ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಸೈನಿಕ ಶಾಲೆಯನ್ನು ಒಟ್ಟು 230 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ನಮ್ಮ ಯುವಕರ ಆದರ್ಶಪ್ರಾಯ ಬದುಕಿಗೆ ಶಿಸ್ತಿನ ಸೈನಿಕ ಶಾಲೆಯನ್ನು ನಿರ್ಮಿಸಿ ರಕ್ಷಣಾ ಇಲಾಖೆಗೆ ಹಸ್ತಾಂತರಿಸುವ ಇಚ್ಛೆಯನ್ನು ಸರ್ಕಾರ ಹೊಂದಿದೆ ಎಂದು ಸಿಎಂ ತಿಳಿಸಿದರು.