ನ್ಯೂಸ್

ಭೀಕರ ರಸ್ತೆ ಅಪಘಾತ: ಎಸಿಪಿ ಪತ್ನಿ ಸೇರಿ ಮೂವರ ಸಾವು, ಕೆವಿಎಂ ಪ್ರಸಾದ್​ ಸ್ಥಿತಿ ಗಂಭೀರ

ಹೈದರಾಬಾದ್​: ಇಂದು ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಹೈದರಾಬಾದ್​ ಸೈಬರ್​ ಕ್ರೈಂ ವಿಭಾಗದ ಎಸಿಪಿ ಕೆವಿಎಂ ಪ್ರಸಾದ್​ ಅವರ ಪತ್ನಿ ಸೇರಿ ಮೂವರು ಮೃತಪಟ್ಟಿದ್ದಾರೆ.

ಎಸಿಪಿ ಕುಟುಂಬಸ್ಥರು ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆಂದು ಪ್ರಕಾಶಂ ಜಿಲ್ಲೆಯ ಚಿರಾಲಕ್ಕೆ ಹೋಗಿ ಕಾರಿನಲ್ಲಿ ವಾಪಸ್​ ಆಗುತ್ತಿದ್ದರು. ಮಾರ್ಗ ಮಧ್ಯೆ ಕೀಸರ ತಾಲೂಕಿನ ಯಾದ್ಗಾರಪಲ್ಲಿಯ ಔಟರ್​ ರಿಂಗ್​ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಕಾರು ರಸ್ತೆ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ಕೆವಿಎಂ ಪ್ರಸಾದ್​ ಅವರ ಪತ್ನಿ ಕೆ.ಶಂಕರಮ್ಮ(48), ಪ್ರಸಾದ್ ಅವರ ತಂಗಿ ರೇಣುಕಾ(42)ಮತ್ತು ಇವರ ಪತಿ ಕೆ.ಬಾಲಕೃಷ್ಣ(48) ಮೃತಪಟ್ಟಿದ್ದು, ಎಸಿಪಿ ಕೆವಿಎಂ ಪ್ರಸಾದ್​ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.