ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದಿಂದ ನೂರು ಶಾಲೆಗಳಿಗೆ ನೂರು ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಸೆ.16ರಂದು ಬೆಳಗ್ಗೆ 11ಗಂಟೆಗೆ ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ತಿಳಿಸಿದರು.
ಕಾರ್ಯಕ್ರಮವನ್ನು ಡಿಸಿ ಡಾ. ಮೀನಾ ನಾಗರಾಜ್ ಉದ್ಘಾಟಿಸುವರು. ಕಾದಂಬರಿಕಾರ ಎಂ.ಆರ್.ದತ್ತಾತ್ರಿ ಪುಸ್ತಕಗಳನ್ನು ಅನಾವರಣಗೊಳಿಸಲಿದ್ದಾರೆ. ಶಾಸಕ ಎಚ್.ಡಿ.ತಮ್ಮಯ್ಯ ಪುಸ್ತಕ ವಿತರಿಸುವರು. ನಿಡಸಾಲೆ ಪುಟ್ಟಸ್ವಾಮಯ್ಯ ಅಧ್ಯಕ್ಷತೆ ವಹಿಸುವರು. ಡಿಡಿಪಿಐ ಜಿ.ರಂಗನಾಥಸ್ವಾಮಿ, ಚಿಕ್ಕಮಗಳೂರು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಭಾಗವಹಿಸುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸಂಘದಿಂದ ಒಂದೊಂದು ವರ್ಷ ಒಂದೊಂದು ಜಿಲ್ಲೆಯ ನೂರು ಶಾಲೆಗಳಿಗೆ ತಲಾ ನೂರು ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಗುತ್ತಿದೆ. ಈ ಬಾರಿ ಚಿಕ್ಕಮಗಳೂರು ಜಿಲ್ಲೆಯ ನೂರು ಶಾಲೆಗಳಿಗೆ ಪುಸ್ತಕ ನೀಡಲಾಗುತ್ತಿದೆ. ನಮ್ಮ ಸಂಘದಿಂದ ಶಾಲೆಗಳನ್ನು ಆಯ್ಕೆ ಮಾಡುವುದಿಲ್ಲ. ಬದಲಿಗೆ ಚಿಕ್ಕಮಗಳೂರು ಡಿಡಿಪಿಐ ಆಯ್ಕೆ ಮಾಡುವ ನೂರು ಶಾಲೆಗಳಿಗೆ ತಲಾ ನೂರು ಪುಸ್ತಕಗಳನ್ನು ನೀಡಲಾಗುವುದು ಎಂದು ವಿವರಿಸಿದರು.
ಸಂಘದಿಂದ ದಾನಿಗಳಿಂದ ಪುಸ್ತಕಗಳನ್ನು ಸಂಗ್ರಹಮಾಡಿ ಅವುಗಳಲ್ಲಿ ಮಕ್ಕಳಿಗೆ ಅನುಕೂಲವಾಗುವಂಥ ವ್ಯಾಕರಣ, ಸಣ್ಣಕಥೆಗಳ ಪುಸ್ತಗಳನ್ನು ಬಂಡಲ್ ಮಾಡಿ ಶಾಲೆಗಳಿಗೆ ವಿತರಿಸಲಾಗುವುದು. ಪುಸ್ತಕ ಪಡೆಯಲು ಆಯ್ಕೆಯಾಗಿರುವ ಶಾಲೆಯ ಓರ್ವ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಪುಸ್ತಕಗಳನ್ನು ಪಡೆಯಲಿದ್ದಾರೆ ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಪ್ರಮುಖರಾದ ಸುರೇಶ್, ಕೀರ್ತಿಚಂದ್ರ, ಸೋಮಶೇಖರ ಮತ್ತಿತರರಿದ್ದರು.