ಶಿವಮೊಗ್ಗ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಪೂರ್ಣಗೊಂಡ ನಂತರ ವಿಚಾರಣೆಗೆ ವಿಶೇಷ ತ್ವರಿತ ನ್ಯಾಯಾಲಯ ರಚನೆ ಮಾಡುವ ಚಿಂತನೆ ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಅಕ್ರಮದಲ್ಲಿ ಸಿಕ್ಕಿಬಿದ್ದವರು ಬಹಳ ವರ್ಷಗಳಿಂದ ಅಕ್ರಮದಲ್ಲಿ ತೊಡಗಿರುವುದು ತನಿಖೆ ವೇಳೆ ಬಹಿರಂಗಗೊಂಡಿದೆ. ಸಿಐಡಿ ತನಿಖೆ ಪಾರದರ್ಶಕವಾಗಿ ನಡೆಯುತ್ತಿದ್ದು, ತನಿಖೆ ಪೂರ್ಣಗೊಂಡರೆ ಆರೋಪಿಗಳ ಬಣ್ಣ ಬಯಲಾಗಲಿದೆ. ಅಕ್ರಮದ ರೂವಾರಿಗಳು ಎದೆ ಮುಟ್ಟಿ ನೋಡಿಕೊಳ್ಳುವಂತೆ ಮಾಡುತ್ತೇವೆ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ಕೋರ್ಟ್ ತೀರ್ಪು ಗಮನಿಸಿ ಪಿಎಸ್ಐ ನೇಮಕಾತಿಗೆ ಮರುಪರೀಕ್ಷೆ ದಿನಾಂಕವನ್ನು ನಿಗದಿ ಮಾಡುತ್ತೇವೆ. ಈ ಪ್ರಕರಣದಲ್ಲಿ ಯಾರದ್ದೇ ಮುಲಾಜನ್ನೂ ನೋಡುವುದಿಲ್ಲ ಎಂದು ಪುನರುಚ್ಛರಿಸಿದರು.
ಗೃಹ ಸಚಿವರು ಅಸಮರ್ಥರು ಎಂಬ ಕಾಂಗ್ರೆಸ್ ಟೀಕೆಗೆ ಕಿಡಿಕಾರಿದ ಆರಗ ಜ್ಞಾನೇಂದ್ರ, ಪ್ರಕರಣದಲ್ಲಿ ಹಲವರನ್ನು ಬಂಧಿಸಿದ್ದೇವೆ. ತಪ್ಪಿತಸ್ಥರು ಕಂಬಿ ಹಿಂದೆ ಹೋಗುವಂತೆ ಮಾಡಿದ್ದೇವೆ. ಯಾರೋ ಏನೋ ಹೇಳುತ್ತಾರೆ ಎಂಬುದನ್ನು ತಲೆಕೆಡಿಸಿಕೊಳ್ಳುವುದಿಲ್ಲ. ಕಾಂಗ್ರೆಸ್ನ ಇಬ್ಬರು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಹಗರಣ ನಡೆಸಿರುವ ಸಾಧ್ಯತೆ ಹೆಚ್ಚಿದೆ. ಇದಕ್ಕೆ ಕಾಂಗ್ರೆಸ್ನವರು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಶಾಸಕ ಪ್ರಿಯಾಂಕ್ ಖರ್ಗೆ ಅವರು ಇಡೀ ಪ್ರಕರಣದ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸಾಕ್ಷ್ಯಾಧಾರ ಇದೆ ಎಂದು ಹೇಳುತ್ತಿದ್ದಾರೆ. ತನಿಖಾ ತಂಡಕ್ಕೆ ಕೊಡಿ ಕ್ರಮ ಕೈಗೊಳ್ಳುತ್ತೇವೆ ಎಂದರೆ ಬೆನ್ನು ತೋರಿಸಿ ಹೋಗುತ್ತಿದ್ದಾರೆ. ಮಾಧ್ಯಮದ ಮುಂದೆ ಹೀರೋ ಆಗುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪಕ್ಷದವರೇ ಸಿಕ್ಕಿಬಿದ್ದಿದ್ದು ಎಲ್ಲವೂ ಶ್ರೀಘ್ರವೇ ಬಯಲಿಗೆ ಬರಲಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.