ಎನ್.ಎಲ್. ಶಿವಮಾದು
ಬೆಂಗಳೂರು: ದ್ವಿತೀಯ ಪಿಯುಸಿ ಅಂಕಪಟ್ಟಿಯನ್ನು ಇಲ್ಲಿಯವರೆಗೂ ಉಚಿತವಾಗಿ ತಿದ್ದುಪಡಿ ಮಾಡಿಕೊಡುತ್ತಿದ್ದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಇದೀಗ ತಿದ್ದುಪಡಿ ಮಾಡಿಕೊಡಲು 1,600 ರೂ.ಗಳನ್ನು ವಿಧಿಸುವ ಮೂಲಕ ವಿದ್ಯಾರ್ಥಿಗಳ ಜೇಬಿಗೆ ಕತ್ತರಿ ಹಾಕಿದೆ.
ಸಾಮಾನ್ಯವಾಗಿ ವಿದ್ಯಾರ್ಥಿಗಳ ಹೆಸರು, ತಂದೆ-ತಾಯಿ ಹೆಸರು, ಜನ್ಮ ದಿನಾಂಕಗಳಲ್ಲಿ ಸಣ್ಣ ಪುಟ್ಟ ವ್ಯಾಕರಣ ದೋಷಗಳಾಗುತ್ತದೆ. ಇವುಗಳನ್ನು ಮಂಡಳಿ ಗಮನಕ್ಕೆ ತಂದಾಗ ಪ್ರತಿ ವರ್ಷದ ನಿರಂತರ ಪ್ರಕ್ರಿಯೆಯಾಗಿ ತಪ್ಪುಗಳನ್ನು ತಿದ್ದಿ ಪರಿಷ್ಕೃತ ಅಂಕಪಟ್ಟಿಗಳನ್ನು ವಿತರಿಸುವುದು ಮಂಡಳಿಯ ಸಾಮಾನ್ಯ ಕೆಲಸವಾಗಿದೆ.
ಆದರೆ, ಇದೇ ಮೊದಲ ಬಾರಿಗೆ 1,600 ರೂ.ಗಳನ್ನು ವಿಧಿಸುತ್ತಿರುವುದು ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಭಾರೀ ಹೊಡೆತ ನೀಡಿದೆ. ಕೆಲವು ಬಾರಿ ವಿದ್ಯಾರ್ಥಿಗಳು ಮಾತ್ರವಲ್ಲದೆ, ಕಾಲೇಜಿನ ಆಡಳಿತ ಮಂಡಳಿ, ಹೆಚ್ಚಿನ ಬಾರಿ ಮಂಡಳಿಯ ಬೆರಳಚ್ಚುಗಾರರು ವ್ಯಾಕರಣ ದೋಷಗಳನ್ನು ಮಾಡಿರುತ್ತಾರೆ. ಇಂತಹ ತಪ್ಪುಗಳನ್ನು ಅಥವಾ ಸಂಖ್ಯೆಗಳನ್ನು ತಪ್ಪಾಗಿ ನಮೂದಿಸಿದ್ದರೆ, ಅವುಗಳನ್ನು ಸರಿಪಡಿಸಿಕೊಡುವ ಕೆಲಸ ಮಾಡಲಾಗುತ್ತಿತ್ತು. ಆದರೀಗ ಅಂತಹ ಕೆಲಸಗಳಿಗೂ ದಂಡ ಮಾದರಿಯಲ್ಲಿ ಹಣ ವಸೂಲಿ ಮಾಡಲು ಮುಂದಾಗಿದೆ.
ಹೊಸ ಆದೇಶವೇನು?
ಪ್ರಸ್ತುತ ಮತ್ತು ಹಿಂದಿನ ಸಾಲಿನ ಅಂಕಪಟ್ಟಿಯಲ್ಲಿ ತಿದ್ದುಪಡಿಗೆ ಮಂಡಳಿಯ ಇ-ಕಚೇರಿ ಕಡತದಲ್ಲಿ ಅನುಮೋದಿಸಿರುವಂತೆ ನಿಗದಿತ ಶುಲ್ಕ 1,600 ರೂ.ಗಳನ್ನು ಕೆ-2 ತಂತ್ರಾಂಶದಲ್ಲಿ ಲಾಗಿನ್ ಆಗಿ ಚಲನ್ ಪ್ರತಿ ಪಡೆದು ಬ್ಯಾಂಕ್‌ನಲ್ಲಿ ಹಣ ಪಾವತಿಸಬೇಕು.
ಹಣ ಪಾವತಿಸಿದ ಮೂಲ ಕೆ-2 ಚಲನ್ ಪ್ರತಿ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯ ದೃಢೀಕೃತ ಪ್ರತಿ ಮತ್ತು ದ್ವಿತೀಯ ಪಿಯುಸಿಯ ಮೂಲ ಅಂಕಪಟ್ಟಿಯನ್ನು ಅರ್ಜಿಯೊಂದಿಗೆ ಲಗತ್ತಿಸಿ ಪ್ರಸ್ತಾವನೆ ಸಲ್ಲಿಸಿದ್ದಲ್ಲಿ ಮಂಡಳಿ ವತಿಯಿಂದ ಪರಿಷ್ಕೃತ ಅಂಕಪಟ್ಟಿಯನ್ನು ನೀಡಲಾಗುತ್ತದೆ ಎಂದು ಮಂಡಳಿ ಅಧ್ಯಕ್ಷರು ಜ್ಞಾಪನ ಪತ್ರ ಹೊರಡಿಸಿದ್ದಾರೆ.
ಈ ಆದೇಶ ಪ್ರತಿಯನ್ನು ಪಿಯು ಇಲಾಖೆ ನಿರ್ದೇಶಕರು, ರಾಜ್ಯ ಎಲ್ಲ ಜಿಲ್ಲಾ ಉಪನಿರ್ದೇಶಕರು, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕಾಲೇಜುಗಳ ಪ್ರಾಂಶುಪಾಲರಿಗೆ ಕಳುಹಿಸಿಕೊಟ್ಟಿದ್ದಾರೆ.
ಹಳೆಯ ನಿಯಮವೇನಿತ್ತು?
ಅಂಕಪಟ್ಟಿಯಲ್ಲಿನ ತಿದ್ದುಪಡಿಗಳಿಗೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಪ್ರಸ್ತಾವನೆಗಳನ್ನು ಪಿಯು ಅಂಕಪಟ್ಟಿ ಶಾಖೆಗೆ ಮೂಲ ಅಂಕಪಟ್ಟಿಯೊಂದಿಗೆ ಸಲ್ಲಿಸುತ್ತಿದ್ದರು.
ಅಂಕಪಟ್ಟಿಯಲ್ಲಿ ತಿದ್ದುಪಡಿಗೆ ಯಾವುದೇ ಶುಲ್ಕವನ್ನು ಪಡೆಯುತ್ತಿರಲಿಲ್ಲ. ಅಭ್ಯರ್ಥಿಯು ಸಲ್ಲಿಸಿರುವ ಮೂಲ ಅಂಕಪಟ್ಟಿಯಲ್ಲಿಯೇ ಬೆರಳಚ್ಚು ಯಂತ್ರದ ಮೂಲಕ ತಿದ್ದುಪಡಿ ಮಾಡಿ ಶಾಖೆಯ ಹಿರಿಯ ಸಹಾಯಕ ನಿರ್ದೇಶಕರಿಂದ ದೃಢೀಕರಿಸಿ ಕಳುಹಿಸಿಕೊಡುತ್ತಿದ್ದರು.
ಆದರೆ, ಕೆಲವು ಅಭ್ಯರ್ಥಿಗಳು, ಮೂಲ ಅಂಕಪಟ್ಟಿಯಲ್ಲಿಯೇ ತಿದ್ದುಪಡಿಯಾಗಿರುವುದನ್ನು ಒಪ್ಪದೆ ಮೂಲ ಅಂಕಪಟ್ಟಿಯನ್ನು ಹಿಂದುರುಗಿಸಿ ದ್ವಿಪ್ರತಿಗಾಗಿ (ಹೊಸ ಪ್ರತಿ) ಪ್ರಸ್ತಾವನೆಗಳನ್ನು ಮಂಡಳಿಗೆ ಸಲ್ಲಿಸುತ್ತಿದ್ದಾರೆ. ಭಾವಚಿತ್ರಗಳ ತಿದ್ದುಪಡಿಯನ್ನು ಕರೆಕ್ಟೆಟ್ ಕಾಪಿ ಎಂದು ಮುದ್ರಿಸಿ ವಿತರಿಸಲಾಗುತ್ತಿದೆ.
ನಕಲು ಪ್ರತಿಗೆ ವಿಧಿಸುತ್ತಿದ್ದ ಶುಲ್ಕ:
ಈ ಮೊದಲು ನಕಲು ಪ್ರತಿ ಪಡೆಯಲು ವಿಧಿಸುತ್ತಿದ್ದ ಶುಲ್ಕದ ಮಾದರಿಯಲ್ಲಿ ಎಲ್ಲ ಪ್ರಸಕ್ತ ಮತ್ತು ಹಿಂದಿನ ವರ್ಷಗಳ ಅಂಕಪಟ್ಟಿಯನ್ನು ತಿದ್ದುಪಡಿಗೆ ಶುಲ್ಕವನ್ನು ನಿಗದಿಪಡಿಸಿ ಅಂಕಪಟ್ಟಿಗಳನ್ನು ನೀಡುವ ಬಗ್ಗೆ ಮಂಡಳಿಯಿಂದ ಆದೇಶವನ್ನು ಹೊರಡಿಸಲು ಕ್ರಮ ಕೈಗೊಳ್ಳುವ ಬಗ್ಗೆ ಇತ್ತೀಚಗೆ ಚರ್ಚಿಸಲಾಗಿತ್ತು. ಈಗ ಅಧಿಕೃತ ಆದೇಶ ಹೊರಬಿದ್ದಿದೆ.
ಅಂಪಟ್ಟಿ ತಿದ್ದುಪಡಿಗೆ ಶುಲ್ಕ ನಿಗದಿ ಮಾಡುವ ಸಂಬಂಧ ತೀರ್ಮಾನ ಕೈಗೊಳ್ಳಲಾಗಿದೆ. ಯಾವ ಕಾರಣದಿಂದ ಶುಲ್ಕ ವಿಧಿಸಲಾಗುತ್ತಿದೆ ಎಂದು ಮಾಹಿತಿ ಪಡೆದು ಪ್ರತಿಕ್ರಿಯಿಸುತ್ತೇನೆ. - ಎಚ್. ಬಸವರಾಜೇಂದ್ರ, ಪರೀಕ್ಷಾ ಮಂಡಳಿ ಅಧ್ಯಕ್ಷ