ಸಿರಿಧಾನ್ಯ ಬೆಳೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿರುವುದು ಆರೋಗ್ಯಕರ ಆಹಾರ ಪದ್ಧತಿ ಬೆಂಬಲಿಸುವ ಕ್ರಮವೆನ್ನಬಹುದಾಗಿದೆ. 2023ನ್ನು ವಿಶ್ವಸಂಸ್ಥೆಯು ‘ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ’ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಕೇಂದ್ರದ ಈ ಕ್ರಮವು ಸಾಂರ್ದಭಿಕವೂ ಆಗಿದೆ.
ಸಿರಿಧಾನ್ಯಗಳು ಈ ಹಿಂದೆ ಬಡವರ ಆಹಾರ ಎಂದೇ ಪರಿಗಣಿತವಾಗಿದ್ದವು. ಜೋಳ, ರಾಗಿ, ಸಜ್ಜೆ, ನವಣಿ, ಉದುಲು ಬರಗು, ಸಾಮೆ, ಅರಕ ಮುಂತಾದ ಸಿರಿಧಾನ್ಯಗಳು ಹೆಚ್ಚಿನ ಪ್ರಮಾಣದ ನಾರಿನಾಂಶ ಹೊಂದಿರುತ್ತವೆ. ಹಲವಾರು ಜೀವಸತ್ವ, ಖನಿಜಗಳ ಉತ್ತಮ ಮೂಲ ಕೂಡ. ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಕಡಿಮೆ ಮಾಡಲು ಸಹಕಾರಿ ಆಗಿರುವುದರಿಂದ ಮಧುಮೇಹ ನಿಯಂತ್ರಣಕ್ಕೆ ಅನುಕೂಲಕರ ಹಾಗೂ ಜೀರ್ಣಾಂಗ ಸಂಬಂಧಿ ಅಸ್ವಸ್ಥತೆಗಳಿಗೆ ಪರಿಣಾಮಕಾರಿ ಎಂದೇ ಪರಿಗಣಿತ. ಇಂತಹ ಆಹಾರವು ಕನ್ನಡಿಗರಿಗೆ ಅಪರಿಚಿತವೇನಲ್ಲ. ಉತ್ತರ ಕರ್ನಾಟಕದಲ್ಲಿ ಜೋಳವನ್ನು, ದಕ್ಷಿಣ ಕರ್ನಾಟಕದಲ್ಲಿ ರಾಗಿಯನ್ನು ದೈನಂದಿನ ಆಹಾರವಾಗಿ ವ್ಯಾಪಕವಾಗಿ ಬಳಸಲಾಗುತ್ತದೆ.
ಈ ಹಿಂದೆ ದೇಶದಲ್ಲಿ ಸಿರಿಧಾನ್ಯಗಳನ್ನು ಸಾಕಷ್ಟು ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತು. ಆದರೆ, ಏರುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಸ್ವಾವಲಂಬನೆ ಸಾಧಿಸುವುದಕ್ಕಾಗಿ 1965ರಲ್ಲಿ ಜಾರಿಗೊಳಿಸಿದ ಹಸಿರು ಕ್ರಾಂತಿಯ ಯೋಜನೆಯಲ್ಲಿ ಗೋಧಿ ಮತ್ತು ಅಕ್ಕಿ ಬೆಳೆಗಳಿಗೆ ಹೆಚ್ಚಿನ ಒತ್ತು ನೀಡಿದ ಪರಿಣಾಮವಾಗಿ ನಮ್ಮಆಹಾರ ಪದ್ಧತಿ ಮತ್ತು ಜಮೀನುಗಳಿಂದ ಸಿರಿಧಾನ್ಯಗಳು ದೂರವಾಗತೊಡಗಿದವು. ಆದರೂ ಪ್ರಸ್ತುತವಾಗಿ ಭಾರತವೇ ಸಿರಿಧಾನ್ಯ ಬೆಳೆಯುವಲ್ಲಿ ಜಗತ್ತಿನಲ್ಲಿ ಮುಂಚೂಣಿಯಲ್ಲಿದೆ. ವಿಶ್ವದ ಒಟ್ಟಾರೆ ಸಿರಿಧಾನ್ಯಗಳ ಉತ್ಪಾದನೆಯಲ್ಲಿ ಭಾರತದ ಪಾಲು ಶೇ. 18 ಇದೆ. ಆದರೆ, ನಮ್ಮ ದೇಶದ ಒಟ್ಟಾರೆ ಕೃಷಿ ಉತ್ಪನ್ನಗಳಲ್ಲಿ ಇವುಗಳ ಪಾಲು ಕೇವಲ ಶೇ. 6ರಷ್ಟಿದೆ.
ಈಗ ಕೇಂದ್ರ ಸರ್ಕಾರವು ಸಿರಿಧಾನ್ಯಗಳಿಗೆ ದೇಶಿ- ವಿದೇಶಿ ಮಾರುಕಟ್ಟೆ ಸೃಷ್ಟಿಸಲು ಮುಂದಾಗಿದೆ. ಸಿರಿಧಾನ್ಯ ಉತ್ಪನ್ನಗಳನ್ನು ಪ್ರೋತ್ಸಾಹಿಸುವುದಕ್ಕಾಗಿ 19 ರಾಷ್ಟ್ರಗಳ ಪ್ರಮುಖ ನಗರಗಳಲ್ಲಿ ಮುಂಬರುವ ವರ್ಷದಲ್ಲಿ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಿದೆ. ಬೆಂಗಳೂರು, ಮುಂಬೈ, ಕೊಲ್ಕತಾ, ಚೆನ್ನೈ ಮಹಾನಗರಗಳಲ್ಲಿ ಸಿರಿ ಧಾನ್ಯ ಪ್ರದರ್ಶನ ಏರ್ಪಡಿಸಲು ಮುಂದಾಗಿದೆ. ‘ಸಿರಿಧಾನ್ಯ ಗ್ರಾಮಗಳ ಪ್ರವಾಸೋದ್ಯಮ’ ಸೇರಿದಂತೆ ಹಲವಾರು ಚಟುವಟಿಕೆಗಳನ್ನು 10 ರಾಜ್ಯಗಳ 19 ಜಿಲ್ಲೆಗಳಲ್ಲಿ ನಡೆಸಲು ಯೋಜನೆ ರೂಪಿಸಿದೆ. ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡುವ ಸಲುವಾಗಿ ಕರ್ನಾಟಕ ಸರ್ಕಾರವು ‘ರೈತ ಸಿರಿ ಯೋಜನೆ’ಯನ್ನು ಈ ಸಾಲಿನ ಬಜೆಟ್ನಲ್ಲಿ ಘೋಷಿಸಿದೆ.
ಸಿರಿಧಾನ್ಯ ಬೆಳೆಗಳ ವಿಸ್ತೀರ್ಣ ಹೆಚ್ಚಿಸಲು ಪ್ರತಿ ಹೆಕ್ಟೇರ್ಗೆ 10,000 ರೂಪಾಯಿ ಅನುದಾನವನ್ನು ರೈತರ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಪಾವತಿಸಲಾಗುತ್ತದೆ. ಸಿರಿಧಾನ್ಯಗಳ ಆರೋಗ್ಯವರ್ಧಕ ಅಂಶಗಳು ಮುನ್ನೆಲೆಗೆ ಬಂದ ಹಿನ್ನೆಲೆಯಲ್ಲಿ ವ್ಯಾಪಕ ಬೇಡಿಕೆ ಉಂಟಾಗಿ ಸಿರಿವಂತರ ಧಾನ್ಯ ಎನ್ನುವಷ್ಟರ ಮಟ್ಟಿಗೆ ಬೆಲೆಗಳಲ್ಲಿ ಏರಿಕೆ ಕಂಡುಬಂದಿದೆ. ಬೇಡಿಕೆ ಹಾಗೂ ಪೂರೈಕೆ ನಡುವಿನ ಅಗಾಧ ವ್ಯತ್ಯಾಸ ಬೆಲೆ ಏರಿಕೆಯ ಪ್ರಮುಖ ಕಾರಣವಾಗಿದೆ. ಸಿರಿಧಾನ್ಯ ಬೆಳೆಯಲು ಹೆಚ್ಚು ನೀರಿನ ಅಗತ್ಯವಿಲ್ಲ. ಒಣ ಬೇಸಾಯ ಪ್ರದೇಶಕ್ಕೆ ಸೂಕ್ತ. ಫಸಲು ಕೈಗೆ ಬರುವ ಅವಧಿಯೂ ಕಡಿಮೆ. ಇಂತಹ ಅಂಶಗಳನ್ನು ರೈತರಿಗೆ ಮನವರಿಕೆ ಮಾಡಿಕೊಟ್ಟು ಪ್ರೋತ್ಸಾಹ ನೀಡಿದರೆ ಕೊರತೆ ನೀಗಿ ಬೆಲೆಯೂ ನಿಯಂತ್ರಣಕ್ಕೆ ಬರಲು ಸಾಧ್ಯವಾಗುತ್ತದೆ.