ಚಾಮರಾಜನಗರ: ಜಿಲ್ಲೆಯ ಸರ್ಕಾರಿ ಶಾಲೆಯೊಂದು ಸಮವಸ್ತ್ರದಿಂದಲೇ ಐದೂವರೆ ವರ್ಷದಿಂದ ಎಲ್ಲರ ಗಮನ ಸೆಳೆಯುತ್ತಿದೆ. ಗುಂಡ್ಲುಪೇಟೆ ತಾಲೂಕಿನ ಹೊಂಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಷ್ಟೇ ಸಮವಸ್ತ್ರ ಧರಿಸಿ ಬರುವುದಿಲ್ಲ. ಶಿಕ್ಷರು, ಬಿಸಿಯೂಟ ಅಡುಗೆ ಸಿಬ್ಬಂದಿ, ಎಸ್ಡಿಎಂಸಿ ಸದಸ್ಯರಿಗೂ ಸಮವಸ್ತ್ರವನ್ನು ಕಡ್ಡಾಯಗೊಳಿಸಿದ್ದು, ಇದನ್ನು ಚಾಚೂತಪ್ಪದೇ ಎಲ್ಲರೂ ಪಾಲನೆ ಮಾಡಿಕೊಂಡು ಬರುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ದಿನಕ್ಕೊಂದು ಬಣ್ಣದ ಸಮವಸ್ತ್ರವಿದೆ.
ಶಾಲೆಯಲ್ಲಿ ಒಟ್ಟು 105 ವಿದ್ಯಾರ್ಥಿಗಳಿದ್ದಾರೆ. ಶಾಲೆಯ ಮುಖ್ಯಶಿಕ್ಷಕ ಬಿ.ಮಹಾದೇಶ್ವರಸ್ವಾಮಿ ಅವರ ಪ್ರಯತ್ನದ ಫಲವಾಗಿ ವಿದ್ಯಾರ್ಥಿಗಳಿಗೆ ದಿನಕ್ಕೊಂದು ಸಮವಸ್ತ್ರ, ಅಡುಗೆ ಸಿಬ್ಬಂದಿ ಹಾಗೂ ಶಿಕ್ಷಕ ವರ್ಗಕ್ಕೆ ದಿನ ಬಿಟ್ಟು ದಿನದಂತೆ ಮೂರು ಮತ್ತು ಎಸ್ಡಿಎಂಸಿ ಸದಸ್ಯರಿಗೆ ಎರಡು ಸಮವಸ್ತ್ರಗಳಿವೆ.
ವಿದ್ಯಾರ್ಥಿಗಳಿಗೆ ದಿನಕ್ಕೊಂದು ಬಣ್ಣದ ಸಮವಸ್ತ್ರವಿದು, ಶನಿವಾರ ವಿದ್ಯಾಥಿರ್ಗಳು ಸೇರಿದಂತೆ ಶಿಕ್ಷಕರು ಬಿಳಿ ಬಣ್ಣದ ಬಟ್ಟೆ ಧರಿಸುವ ಜತೆಗೆ ಗಾಂಧಿ ಟೋಪಿ ತೊಡುವುದು ವಿಶೇಷ.
ಶಾಲೆಯಲ್ಲಿ ನಡೆಯುವ ಬಹುತೇಕ ಕಾಮಗಾರಿಗಳಲ್ಲಿ ರಜಾ ದಿನಗಳಲ್ಲಿ ಶಿಕ್ಷಕರು, ಎಸ್ಡಿಎಂಸಿ ಸದಸ್ಯರೇ ಕೆಲಸ ಮಾಡುತ್ತಾರೆ. ಶಿಕ್ಷಕರು, ಎಸ್ಡಿಎಂಸಿ ಸದಸ್ಯರು ಸೇರಿಕೊಂಡು ಕಾಂಪೌಂಡ್, ಶೌಚಗೃಹ ನಿರ್ಮಾಣ ಮಾಡಿದ್ದಾರೆ.
ಲಾಕ್ಡೌನ್ ಅವಧಿಯಲ್ಲಿ ಶಿಕ್ಷಕ ಬಿ.ಮಹಾದೇಶ್ವರಸ್ವಾಮಿ ಶಾಲೆಯ ಗಿಡಗಳಿಗೆ ನೀರುಣಿಸಿ ಮಕ್ಕಳು ಬೆಳೆಸಿದ ಗಿಡ, ಪರಿಸರ ಹಾಳಾಗದಂತೆ ನೋಡಿಕೊಳ್ಳುವ ಮೂಲಕ ಅಂದಿನ ಶಿಕ್ಷಣ ಸಚಿವರಾಗಿದ್ದ ಸುರೇಶ್ಕುಮಾರ್ ಅವರ ಮೆಚ್ಚುಗೆಗೂ ಪಾತ್ರರಾಗಿದ್ದರು.
ಯಾರಿಗೆ ಯಾವ ಬಣ್ಣದ ಸಮವಸ್ತ್ರ? ಶಿಕ್ಷಕರಿಗೆ ಆಕಾಶ ನೀಲಿ, ಬೂದು ಮತ್ತು ಎಣ್ಣೆ ಗೆಂಪು ಬಣ್ಣದ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಇದ್ದು, ಶಿಕ್ಷಕಿಯರು ಎಣ್ಣೆ ಗೆಂಪು, ಆಕಾಶ ನೀಲಿ ಮತ್ತು ಹಸಿರು ಬಣ್ಣದ ಸೀರೆ ಉಡುತ್ತಾರೆ. ಬಿಸಿಯೂಟದ ಸಿಬ್ಬಂದಿಗೂ ಮೂರು ಸಮವಸ್ತ್ರವಿದ್ದು ಕೆಂಪು, ನೀಲಿ ಮತ್ತು ಕ್ರೀಂ ಬಣ್ಣದ ಸೀರೆ ಧರಿಸುತ್ತಾರೆ. ಎಸ್ಡಿಎಂಸಿ ಸದಸ್ಯರಿಗೆ ಬಿಳಿ ಪಂಚೆ, ಶರ್ಟ್ ಜತೆ ಎರಡು ಬಣ್ಣದ ಟವೆಲ್ ಇದೆ. ಎಸ್ಡಿಎಂಸಿ ಸದಸ್ಯರು ತಮ್ಮ ಪ್ರಾಥಮಿಕ ಮಾಹಿತಿಯುಳ್ಳ ಗುರುತಿನ ಚೀಟಿಯನ್ನು ಕೊರಳಿಗೆ ಹಾಕಿಕೊಳ್ಳಲಿದ್ದು, ಶಿಸ್ತಿನ, ಸಮಾನತೆ, ಸಹೋದರತ್ವ ಸಾರುತ್ತಿದ್ದಾರೆ.
ನಮ್ಮ ಶಾಲೆಯಲ್ಲಿ ಮಕ್ಕಳು, ಶಿಕ್ಷಕರು, ಅಡುಗೆಯವರು ಸೇರಿದಂತೆ ಎಲ್ಲರಿಗೂ ಸಮವಸ್ತ್ರ ವ್ಯವಸ್ಥೆ ಮಾಡಿದ್ದೇವೆ. ಇದರ ಉದ್ದೇಶ ಮಕ್ಕಳಲ್ಲಿ ತಾರತಮ್ಯ, ಭೇದಭಾವವಿಲ್ಲದ ದೇಶ ಪ್ರೇಮ ಮೂಡಿಸುವುದಾಗಿದೆ. ನಾವೆಲ್ಲರೂ ಭಾರತಾಂಬೆಯ ಮಕ್ಕಳು ಎಂಬ ಸಮಾನತೆ ಕಲಿಸಲಾಗುತ್ತಿದೆ.
| ಬಿ.ಮಹಾದೇಶ್ವರಸ್ವಾಮಿ ಮುಖ್ಯ ಶಿಕ್ಷಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಂಗಹಳ್ಳಿ
ಹೊಂಗನಹಳ್ಳಿ ಸರ್ಕಾರಿ ಶಾಲೆ ಯಾವ ಖಾಸಗಿ ಶಾಲೆಗೂ ಕಮ್ಮಿ ಇಲ್ಲ ಎಂಬಂತಿದೆ. ಇಲ್ಲಿನ ವಿದ್ಯಾರ್ಥಿಗಳು ಖುಷಿಯಿಂದಲೇ ಅಕ್ಷರ ಕಲಿಯುತ್ತಾ, ಶಿಸ್ತು ಪಾಲಿಸುತ್ತಿದ್ದಾರೆ. ಸಮವಸ್ತ್ರ ಧರಿಸುವ ವಿಚಾರವಾಗಿ ರಾಜ್ಯದಲ್ಲಿ ಭುಗಿಲೆದ್ದಿರುವ ವಿವಾದದ ನಡುವೆಯೂ ಈ ಶಾಲೆ ಮಾದರಿ ಎನ್ನಿಸಿದೆ.