ತಾಲೂಕಿನ ಟಿ.ಎಂ.ಹೊಸೂರು ಗ್ರಾಮದ ಪ್ರಾಥಮಿಕ ಚಿಕಿತ್ಸಾ ಕೇಂದ್ರ ಆವರಣದಲ್ಲಿ ಇತ್ತೀಚೆಗೆ 3 ಕೋಟಿ ರೂ. ವೆಚ್ಚದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಭೂಮಿಪೂಜೆ ನೆರವೇರಿಸಿದರು. ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಮಹದೇವು, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಎಂ.ಟಿ.ದೇವರಾಜು, ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜು ಇದ್ದರು. 
ನ್ಯೂಸ್

ಗ್ರಾಮೀಣ ಜನರ ಬದುಕಿಗೆ ವರವಾದ ಗ್ಯಾರಂಟಿ

ಶ್ರೀರಂಗಪಟ್ಟಣ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದ ಗದ್ದುಗೆ ಏರಿ ಪಂಚ ಗ್ಯಾರಂಟಿ ಒದಗಿಸುವ ಜತೆಗೆ ಬಡಜನರು, ಶ್ರಮಿಕರು ಹಾಗೂ ಗ್ರಾಮೀಣ ಜನರ ಬದುಕಿಗೆ ಸುರಕ್ಷತೆ, ಸೌಲಭ್ಯ ಮತ್ತು ಸೌಕರ್ಯ ತಲುಪಿಸುವಲ್ಲಿ ಭಾಗಶಃ ಸಫಲವಾಗಿದೆ ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಹೇಳಿದರು.
ತಾಲೂಕಿನ ಟಿ.ಎಂ.ಹೊಸೂರು ಗ್ರಾಮದಲ್ಲಿ ಇತ್ತೀಚೆಗೆ ಗ್ರಾಮದ ಪ್ರಾಥಮಿಕ ಚಿಕಿತ್ಸಾ ಕೇಂದ್ರ ಉನ್ನತೀಕರಣಗೊಳಿಸುವ ನಿಟ್ಟಿನಲ್ಲಿ 3 ಕೋಟಿ ರೂ. ವೆಚ್ಚದ ನೂತನ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮದಲ್ಲಿ 5 ದಶಕಗಳ ಹಿಂದೆ ನಮ್ಮ ತಂದೆಯವರ ಸಹಕಾರದಿಂದ ಗ್ರಾಮೀಣ ಜನರ ಆರೋಗ್ಯ ಸುರಕ್ಷೆಗಾಗಿ ನಿರ್ಮಾಣವಾದ ಈ ಆಸ್ಪತ್ರೆಯನ್ನು ಈಗ ಇನ್ನಷ್ಟು ಆಧುನಿಕ ಸೌಕರ್ಯದೊಂದಿಗೆ ಮೇಲ್ದರ್ಜೆಗೇರಿಸುವ ಉದ್ದೇಶದಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಡಿ.ಕೆ.ಶಿವಕುಮಾರ್ ಅವರ ಮುಂದಾಳತ್ವದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ನೀಡಿದ್ದ ಭರವಸೆಗಳನ್ನು ಪಂಚ ಗ್ಯಾರಂಟಿ ಹಾಗೂ ವಿದ್ಯುತ್, ನೀರಾವರಿ, ರಸ್ತೆ, ಚರಂಡಿ, ಆರೋಗ್ಯ, ಕೃಷಿ, ಕಂದಾಯ ಸೇರಿದಂತೆ ಎಲ್ಲ ಇಲಾಖೆಗಳಿಂದ ಸಾಮಾನ್ಯ ಜನರಿಗೆ ಸಿಗುವ ಸೌಲಭ್ಯಗಳನ್ನು ಜಾರಿಗೊಳಿಸಿ ಅಭಿವೃದ್ಧಿ ಪಥದ ಹಾದಿಯಲ್ಲಿ ಸಫಲರಾಗಿದ್ದೇವೆ. ಕೃಷಿ ಸಚಿವರಾಗಿದ್ದ ಎನ್.ಚಲುವರಾಯಸ್ವಾಮಿ ಅವರ ಸಹಕಾರದಿಂದ ನೂರಾರು ಜನರಿಗೆ ಬೋರ್‌ವೆಲ್ ಕೊರೆಸಿ, ನೀರು ಒದಗಿಸುವ ಮೂಲಕ ಕೃಷಿ ಪೂರಕವಾಗಿ ರೈತರಿಗೆ ಅನುಕೂಲ ಕಲ್ಪಿಸಿದ್ದೇವೆ ಎಂದರು.
ಶ್ರೀರಂಗಪಟ್ಟಣ ಕ್ಷೇತ್ರವನ್ನು ಜನರ ನೀರಿಕ್ಷೆಗೂ ಮೀರಿ ಪ್ರವಾಸೋದ್ಯಮದಲ್ಲಿ ಮೇಲ್ದರ್ಜೆಗೇರಿಸಲಾಗುವುದು. ಉತ್ತಮ ಆರೋಗ್ಯ ಸೇವೆಗೆ ಮತ್ತೊಂದು ನೂತನ ಜಿಲ್ಲಾಸ್ಪತ್ರೆ ನಿರ್ಮಾಣ ಮಾಡಲಾಗುವುದು. ಕೈಗಾರಿಕೆ ಹಬ್‌ಗಳ ನಿರ್ಮಾಣ, ಉತ್ತಮ ರಸ್ತೆಗಳನ್ನು ನಿರ್ಮಿಸಿ ಕ್ಷೇತ್ರವನ್ನು ಮಾದರಿಯಾಗಿ ಮಾಡಲಾಗುವುದು ಎಂದರು.
ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಮಹದೇವು, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್.ಎಂ.ಟಿ.ದೇವರಾಜು, ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜು, ಮುಖಂಡರಾದ ಎಚ್.ಪಿ.ಮಹೇಶ್, ನಟರಾಜು, ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀಧರ್, ಪ್ರಾಥಮಿಕ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ.ಗುರುಪ್ರಸಾದ್, ಆರೋಗ್ಯ ನೀರಿಕ್ಷಾಣಾಧಿಕಾರಿ ಚಂದನ್, ಸಮುದಾಯ ಆರೋಗ್ಯಾಧಿಕಾರಿ ಪೂಜಾ, ಬಿಪಿಎಂ ಅಭಿನಂದನ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ಆಶಾ ಕಾರ್ಯಕರ್ತೆಯರು ಇದ್ದರು.