ಆನಂದಪುರ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಮಂಗಳವಾರ ಸ್ವಗ್ರಾಮಕ್ಕೆ ಆಗಮಿಸಿದ ಸಮೀಪದ ಹಿರೇಹಾರಕ ಗ್ರಾಮದ ಸುಬೇದಾರ್ ಗಣಪತಿ ಅವರಿಗೆ ಗ್ರಾಮಸ್ಥರು, ಸಾಗರದ ನಿವೃತ್ತ ಸೇನಾ ಬಳಗ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಗಣಪತಿ ಅವರು ಯೋಧರಾಗಿ ಸೈನ್ಯಕ್ಕೆ ಸೇರಿ ಸುಬೇದಾರ ಹುದ್ದೆಗೆ ಬಡ್ತಿ ಪಡೆದಿದ್ದರು. 28 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಅವರು ಭಾನುವಾರ ನಿವೃತ್ತರಾದರು. ಕುಟುಂಬ ಸಮೇತರಾಗಿ ಆಗಮಿಸಿದ ಅವರಿಗೆ ವಾದ್ಯಗೋಷ್ಠಿ, ಬೈಕ್ ರ‌್ಯಾಲಿ ಮೂಲಕ ತೆರೆದ ವಾಹನದಲ್ಲಿ ಯಡೇಹಳ್ಳಿ ವೃತ್ತದಿಂದ ಆನಂದಪುರ ಬಸ್ ನಿಲ್ದಾಣದವರೆಗೆ ಅದ್ದೂರಿ ಮೆರವಣಿಗೆ ನಡೆಸಲಾಯಿತು. ರಾಷ್ಟ್ರಧ್ವಜ, ಕನ್ನಡ ಬಾವುಟಗಳನ್ನು ಹಿಡಿದ ಜನರು ಜೈ ಜವಾನ್, ಜೈ ಕಿಸಾನ್ ಘೋಷಣೆ ಕೂಗುತ್ತ ಜಯಕಾರ ಹಾಕಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗಣಪತಿ ಮಾತನಾಡಿ, ಸೈನಿಕನಾಗಿ ಕಾರ್ಯನಿರ್ವಹಿಸಿ ಬದುಕು ಸಾರ್ಥಕಪಡಿಸಿಕೊಂಡೆ ಎಂದು ಸಂತಸಪಟ್ಟರು.