ಶಿವಮೊಗ್ಗ ತಾಲೂಕಿನ ಬೀರನಕೆರೆ ಗ್ರಾಮಸ್ಥರು ನಿವೃತ್ತ ಯೋಧ ಆರ್.ಕುಮಾರ್‌ನಾಯ್ಕ ಅವರನ್ನು ಶಿವಮೊಗ್ಗದ ಮೀನಾಕ್ಷಿ ಭವನದಿಂದ ಮೆರವಣಿಗೆಯಲ್ಲಿ ಕರೆದೊಯ್ದರು. 
ನ್ಯೂಸ್

ನಿವೃತ್ತ ಯೋಧ ಕುಮಾರನಾಯ್ಕಗೆ ಅದ್ದೂರಿ ಸ್ವಾಗತ

ಶಿವಮೊಗ್ಗ: ಮಿಲಿಟರಿ, ಐಟಿಬಿಪಿ ಸೇವೆಯಿಂದ ನಿವೃತ್ತಿ ಹೊಂದಿ ತಾಲೂಕಿನ ಬೀರನಕೆರೆಗೆ ಆಗಮಿಸಿದ ಯೋಧ ಆರ್.ಕುಮಾರ್‌ನಾಯ್ಕ ಅವರನ್ನು ಗ್ರಾಮಸ್ಥರು ಶಿವಮೊಗ್ಗ ನಗರದಲ್ಲಿ ಸ್ವಾಗತಿಸಿ ಅದ್ದೂರಿ ಮೆರವಣಿಗೆ ಮಾಡಿದರು.

ರೋಟರಿ ಮತ್ತು ವಿವಿಧ ಸಂಘ, ಸಂಸ್ಥೆಗಳು ಮತ್ತು ಬೀರನಕೆರೆ ಗ್ರಾಮಸ್ಥರು ನಗರದ ಮೀನಾಕ್ಷಿ ಭವನದಿಂದ ಟಿ.ಸೀನಪ್ಪಶೆಟ್ಟಿ ವೃತ್ತದವರೆಗೆ ಡೊಳ್ಳು ಸಮೇತ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ ಸ್ವಗ್ರಾಮಕ್ಕೆ ಕರೆದೊಯ್ದರು.
ಇಂಡೋ-ಟಿಬೆಟಿಯನ್ ಬಾರ್ಡರ್‌ನಲ್ಲಿ 21 ವರ್ಷ ಸೇವೆ ಸಲ್ಲಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಅಮರನಾಥ ಯಾತ್ರಿಕರ ರಕ್ಷಣಾ ಕಾರ್ಯಚರಣೆ ನಡೆಸಿ ವಸತಿ ಗೃಹಕ್ಕೆ ಆಗಮಿಸುವಾಗ ಯೋಧರಿದ್ದ ಬಸ್ 700 ಅಡಿ ಆಳಕ್ಕೆ ಬಿದ್ದಿತ್ತು. ಆಗ ಎಲ್ಲರೂ ಮೃತಪಟ್ಟಿದ್ದಾರೆಂಬ ಸುದ್ದಿ ಇಡೀ ದೇಶದಲ್ಲಿ ಹರಡಿತ್ತು. ಅದೃಷ್ಟವಶಾತ್ ಕುಮಾರನಾಯ್ಕ ಬದುಕುಳಿದಿದ್ದರು.
700 ಅಡಿ ಕದಕಕ್ಕೆ ಬಸ್ ಬಿದ್ದರೂ ಭಾರತಾಂಬೆ ಮತ್ತು ನನ್ನ ಹೆತ್ತವ್ವನ ಆಶೀರ್ವಾದದಿಂದ ನಾನು ಬದುಕಿ ಬಂದಿದ್ದೆ ಒಂದು ಪವಾಡ. ಆಸ್ಪತ್ರೆಯಲ್ಲಿದ್ದಾಗ ಸ್ವತಃ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಮಂತ್ರಿ ಅಮಿತ್ ಷಾ ಅವರು ಭೇಟಿ ನೀಡಿ ನನಗೆ ಬದುಕುವ ಉತ್ಸಾಹ, ಧೈರ್ಯ ತುಂಬಿದ್ದರು ಎಂದು ಕುಮಾರನಾಯ್ಕ ಸ್ಮರಿಸಿದರು.
ಹರಿಯಾಣದಲ್ಲಿ ಒಂದು ವರ್ಷ ತರಬೇತಿ, ಚೀನಾ ಗಡಿ ಉಧಮ್‌ಪುರದಲ್ಲಿ 6 ತಿಂಗಳು, ಜಮ್ಮು ಮತ್ತು ಕಾಶ್ಮೀರ ಹಾಗೂ ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶದ ಗಡಿಗಳಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ್ದೇನೆ. ಗಾಯಾಳು ಆದ ಸಂದರ್ಭ ತಮಿಳುನಾಡಿನ ಸೈನಿಕ ಕೇಂದ್ರದಲ್ಲಿ ದೈಹಿಕ ಶಿಕ್ಷಣ ಶಿಕ್ಷಕನಾಗಿ 3.9 ವರ್ಷ ನೇಮಿಸಿದ್ದರು. ನನ್ನ ಸಹೋದರ ಕೂಡ ಮಿಲಿಟರಿ ಸೇವೆ ಮಾಡಿ ನಿವೃತ್ತರಾಗಿದ್ದಾರೆ. ಯುವಕರು ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡಿ ಆ ಸಂತೋಷವೇ ಬೇರೆ ಎಂದರು.
ಬೀರನಕೆರೆ ಗ್ರಾಮದ ಮುಖಂಡ ಬಸವರಾಜ್ ಮಾತನಾಡಿ, ಒಂದೇ ಮನೆಯ ಮೂವರು ಸಹೋದರರು ರಾಷ್ಟ್ರ ಸೇವೆ ಮಾಡುತ್ತಿದ್ದು ಇಡೀ ಗ್ರಾಮಕ್ಕೆ ಗೌರವ ತಂದುಕೊಟ್ಟಿದ್ದಾರೆ ಎಂದು ಹೇಳಿದರು.