ತುಂಗಾ ನದಿಯಲ್ಲಿ ಶ್ರೀ ರಾಮೇಶ್ವರ ದೇವರ ತೆಪ್ಪೋತ್ಸವ. 
ನ್ಯೂಸ್

ರಾಮೇಶ್ವರ ದೇವರ ಅದ್ದೂರಿ ತೆಪ್ಪೋತ್ಸವ

ತೀರ್ಥಹಳ್ಳಿ: ಇಲ್ಲಿನ ಎಳ್ಳಮಾವಾಸ್ಯೆ ಜಾತ್ರೆ ಪ್ರಯುಕ್ತ ಬುಧವಾರ ರಾತ್ರಿ ಜರುಗಿದ ರಾಮೇಶ್ವರ ದೇವರ ತೆಪ್ಪೋತ್ಸವ ಅದ್ದೂರಿಯಾಗಿ ನೆರವೇರಿತು. ಸಿಡಿಮದ್ದು ಪ್ರದರ್ಶನದಿಂದ ಬಾನಂಗಣದಲ್ಲಿ ಮೂಡಿದ ಚಿತ್ತಾರವನ್ನು ಜನರು ಕಣ್ತುಂಬಿಕೊಂಡು ಹರ್ಷ ವ್ಯಕ್ತಪಡಿಸಿದರು.

ತುಂಗಾ ನದಿ ದಡದ ಇಕ್ಕೆಲಗಳಲ್ಲಿ ಉದ್ದಕ್ಕೂ ಅಳವಡಿಸಿದ್ದ ವಿದ್ಯುತ್ ದೀಪಾಲಂಕಾರ, ನದಿಯ ಬಲದಂಡೆಯಲ್ಲಿ ನಿರ್ಮಿಸಿದ್ದ ಆದಿಯೋಗಿ, ಇಲ್ಲಿನ ಲ್ಯಾಂಡ್ ಮಾರ್ಕಿನಂತಿರುವ ತುಂಗಾ ಸೇತುವೆಗೆ ಅಳವಡಿಸಿದ್ದ ಫಾಲ್ಸ್ ನದಿತೀರದ ಸೊಬಗನ್ನು ಇಮ್ಮಡಿಗೊಳಿಸಿತ್ತು. ನದಿ ಮಧ್ಯದಲ್ಲಿ ಬಿಡುತ್ತಿದ್ದ ದೊನ್ನೆ ದೀಪಗಳು ಕೂಡ ಆಕರ್ಷಣೀಯವಾಗಿತ್ತು.

ರಾಮೇಶ್ವರ ದೇವರ ಉತ್ಸವ ಮೂರ್ತಿ ರಾತ್ರಿ 8 ಗಂಟೆಗೆ ಪುರೋತ್ಸವ ಮುಗಿಸಿ ಮಂಗಳವಾದ್ಯದೊಂದಿಗೆ ನದಿದಡಕ್ಕೆ ಆಗಮಿಸುತ್ತಿದ್ದಂತೆ ಭಕ್ತರ ಜಯಘೋಷ ಮುಗಿಲು ಮುಟ್ಟಿತು. ವಿದ್ಯುತ್ ಹಾಗೂ ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿದ್ದ ತೆಪ್ಪದಲ್ಲಿ ದೇವರ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಶಾಸಕ ಆರಗ ಜ್ಞಾನೇಂದ್ರ ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು. ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್, ಜಾತ್ರಾ ಸಮಿತಿ ಗೌರವಾಧ್ಯಕ್ಷ ಎಚ್.ಪಾಂಡುರಂಗಪ್ಪ, ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ, ಟಿ.ಎಲ್.ಸುಂದರೇಶ್ ಮತ್ತು ಸದಸ್ಯರುಗಳು ಇದ್ದರು.

ಮಹಿಳೆಗೆ ಸರ ವಾಪಸ್: ಜಾತ್ರೆಗೆ ಬಂದಿದ್ದ ವಿಶಾಲಾಕ್ಷಿ ಎಂಬುವರು ದೇವಸ್ಥಾನದ ಎದುರು ತಾಳಿಸರವನ್ನು ಕಳೆದುಕೊಂಡಿದ್ದರು. ಸುದೈವವಶಾತ್ ಜಾತ್ರಾ ನಿರ್ವಹಣೆಯಲ್ಲಿ ಕಾರ್ಯನಿರತರಾಗಿದ್ದ ಗ್ರಾಮ ಲೆಕ್ಕಿಗ ಬಿ.ಎ.ಸುಧೀರ್ ಅವರಿಗೆ ದೊರೆತಿತ್ತು. ಲಕ್ಷಾಂತರ ರೂ. ಮೌಲ್ಯದ ತಾಳಿಸರವನ್ನು ಡಿವೈಎಸ್ಪಿ ಗಜಾನನ ಸುತಾರ್ ಸಮ್ಮುಖದಲ್ಲಿ ಸುಧೀರ್ ಅವರು ವಿಶಾಲಾಕ್ಷಿ ಅವರಿಗೆ ವಿತರಿಸಿದರು.