ತೊಗರ್ಸಿಯಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಕಾರ್ತಿಕೋತ್ಸವದಲ್ಲಿ ಶ್ರೀ ಮಹಂತ ದೇಶೀಕೇಂದ್ರ ಸ್ವಾಮೀಜಿ, ಶ್ರೀ ಚನ್ನವೀರ ದೇಶೀಕೇಂದ್ರ ಸ್ವಾಮೀಜಿ, ಶ್ರೀ ಅಭಿನವ ಮಹಂತ ಸ್ವಾಮೀಜಿ ಮತ್ತಿತರರು ದೀಪ ಬೆಳಗಿಸಿದರು. 
ನ್ಯೂಸ್

ತೊಗರ್ಸಿಯಲ್ಲಿ ಅದ್ದೂರಿ ದೀಪೋತ್ಸವ

ಶಿಕಾರಿಪುರ: ತಾಲೂಕಿನ ತೊಗರ್ಸಿಯಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಕಾರ್ತಿಕೋತ್ಸವ ಅದ್ದೂರಿಯಾಗಿ ನೆರವೇರಿತು. ಮಳೆಹಿರೇಮಠದ ಶ್ರೀ ಮಹಂತ ದೇಶೀಕೇಂದ್ರ ಸ್ವಾಮೀಜಿ, ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶೀಕೇಂದ್ರ ಸ್ವಾಮೀಜಿ, ಕಿರಿಯ ಶ್ರೀ ಅಭಿನವ ಮಹಂತ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಕಾರ್ತಿಕೋತ್ಸವ ನಿಮಿತ್ತ ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ರುದ್ರಾಭಿಷೇಕ ಸಹಿತ ವಿವಿಧ ಪೂಜೆಗಳು ನೆರವೇರಿದವು. ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಇಡೀ ಗ್ರಾಮವನ್ನು ತಳಿರು ತೋರಣಗಳಿಂದ ಅಲಂಕೃತಗೊಳಿಸಲಾಗಿತ್ತು. ಗ್ರಾಮದ ಎಲ್ಲೆಡೆ ಹಣತೆ ಹಚ್ಚಲಾಗಿತ್ತು.

ಕಾರ್ತಿಕೋತ್ಸವ, ಅಮಾವಾಸ್ಯೆ ಇದ್ದುದರಿಂದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಭಕ್ತರು ವಿವಿಧೆಡೆಯಿಂದ ಆಗಮಿಸಿದ್ದರು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇಗುಲವನ್ನು ವಿಶೇಷ ವಿದ್ಯುದ್ದೀಪಗಳಿಂದ ಅಲಂಕೃತಗೊಳಿಸಲಾಗಿತ್ತು. ಮೆಟ್ಟಿಲುಗಳು, ಬೆಟ್ಟದ ಮೇಲಿನ ಬಸವಣ್ಣನ ಮಂದಿರ ಕೂಡ ವಿದ್ಯುತ್ ಹಾಗೂ ಮಣ್ಣಿನ ದೀಪಗಳಿಂದ ಕಂಗೊಳಿಸುತ್ತಿದ್ದವು. ದೇವಸ್ಥಾನದ ಅಭಿವೃದ್ಧಿ ಅಧಿಕಾರಿ ಮೇಘರಾಜ್, ಗ್ರಾಮಾಭಿವೃದ್ಧಿ ಅಧಿಕಾರಿ, ವ್ಯವಸ್ಥಾಪನ ಸಮಿತಿ ಪದಾದಿಕಾರಿಗಳು, ಅರ್ಚಕರು, ಗ್ರಾಮಸ್ಥರು ಇತರರಿದ್ದರು.