ತಿ.ನರಸೀಪುರ ತಾಲೂಕಿನ ದೊಡ್ಡನಹುಂಡಿ ಗ್ರಾಮದಲ್ಲಿ ಕೊಂಡೋತ್ಸವ ಶುಕ್ರವಾರ ನಡೆಯಿತು. 
ನ್ಯೂಸ್

ದೊಡ್ಡನಹುಂಡಿಯಲ್ಲಿ ಅದ್ದೂರಿ ಕೊಂಡೋತ್ಸವ

ತಿ.ನರಸೀಪುರ: ತಾಲೂಕಿನ ದೊಡ್ಡನಹುಂಡಿ ಗ್ರಾಮದಲ್ಲಿ ಶುಕ್ರವಾರ ಮುತ್ತೈದೆಯರ ಪೂಜೆ ಹಾಗೂ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು.

ಹಬ್ಬದ ಹಿನ್ನೆಲೆಯಲ್ಲಿ ಶ್ರೀ ಮಹದೇಶ್ವರ ಹಾಗೂ ಸೀಸಳ್ಳಿ ಮಾರಮ್ಮ ದೇವಸ್ಥಾನ ಹಾಗೂ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠವನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಗ್ರಾಮದ ಶ್ರೀ ಮಹದೇಶ್ವರ ದೇಗುಲದಲ್ಲಿ ಬೆಳಗ್ಗೆಯಿಂದಲೇ ವಿವಿಧ ಅಭಿಷೇಕ ಹಾಗೂ ಪೂಜೆ ನೆರವೇರಿದವು. ಮಧ್ಯಾಹ್ನ 12 ಗಂಟೆಗೆ ಗ್ರಾಮದ ಮಧ್ಯದಲ್ಲಿರುವ ಬಾವಿಯಲ್ಲಿ ಗಂಗಾಪೂಜೆ ನೆರವೇರಿಸಿ ನಂತರ ದೇಗುಲಕ್ಕೆ ಮಂಗಳವಾದ್ಯ, ದೇಗುಲದ ಬಸವ, ಸುಮಂಗಲಿಯರ ಕಳಸ ಕನ್ನಡಿಯೊಂದಿಗೆ ಮೆರವಣಿಗೆ ನಡೆಯಿತು.

ಮಧ್ಯಾಹ್ನ 1 ಗಂಟೆಗೆ ಶ್ರೀ ಮಹದೇಶ್ವರ, ಹಾಗೂ ಶ್ರೀ ಸೀಸಳ್ಳಿ ಮಾರಮ್ಮ ದೇವಿ ಅವಾಹನೆಯಾದ ಅರ್ಚಕರು ಭಕ್ತರ ಜಯಘೋಷದೊಂದಿಗೆ ಕೊಂಡ ಹಾಯ್ದರು. ಕೊಂಡೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತಲ್ಲದೆ, ಪಾನಕ, ಮಜ್ಜಿಗೆ ವಿತರಿಸಲಾಯಿತು.

ರಾತ್ರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಿವ-ಪಾರ್ವತಿ ಹಾಗೂ ಶ್ರೀ ಕರಿಬಸವೇಶ್ವರ ದೇವರುಗಳ ಉತ್ಸವ ಅದ್ದೂರಿಯಾಗಿ ನೆರವೇರಿತು.