ನ್ಯೂಸ್

ಗ್ರಾಪಂ ಸಿಬ್ಬಂದಿ ವೇತನ ಪಾವತಿಗೆ ಸಮಿತಿ ರಚಿಸಿದ ಸರ್ಕಾರ

ಬೆಂಗಳೂರು: ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿಸುವ ಹಾಗೂ ಇನ್ನಿತರ ಸೌಲಭ್ಯ ಕಲ್ಪಿಸುವ ಸಂಬಂಧ ಪಂಚಾಯತ್​ರಾಜ್​ ಆಯುಕ್ತಾಲಯದ ಆಯುಕ್ತರ ಅಧ್ಯತೆಯಲ್ಲಿ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಪಂಚಾಯಿತಿಗಳು ತನ್ನ ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿಸದೇ ಇರುವುದರಿಂದ ಹಲವಾರು ಸಮಸ್ಯೆ ಉಂಟಾಗುತ್ತಿವೆ. ನೌಕರರ ಸಂಘಟನೆಗಳು ಪದೇಪದೆ ಮುಷ್ಕರ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಸಮಿತಿ ರಚಿಸಿದ್ದು, 3 ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಸಮಿತಿ ಪರಿಗಣಿಸುವ ಅಂಶಗಳೇನು?

ಪ್ರತಿ ತಿಂಗಳು 5ನೇ ತಾರೀಖಿನ ಒಳಗೆ ಗ್ರಾಪಂ ಸಿಬ್ಬಂದಿಗೆ ವೇತನ ಲಭ್ಯವಾಗುವಂತೆ ಕ್ರಮ ವಹಿಸುವುದು.

ಗ್ರಾಮ ಪಂಚಾಯಿತಿಗಳು ವಸೂಲು ಮಾಡುವ ತೆರಿಗೆಯಲ್ಲಿ ಶೇ.40 ಹಣವನ್ನು ಸಿಬ್ಬಂದಿ ವೇತನಕ್ಕೆ ಮೀಸಲಿಡುವುದು.

15ನೇ ಹಣಕಾಸು ಯೋಜನೆಯಡಿ ಸ್ವಚ್ಛತೆ ಮತ್ತು ನೈರ್ಮಲ್ಯ ಸೇವೆ ನೀಡುವವರಿಗೆ ಪಾವತಿಸಲು ಅನುದಾನ ಮೀಸಲಿಡಲಾಗಿದೆಯೇ ಎಂದು ಪರಿಶೀಲಿಸುವುದು.

ಬಾಕಿ ಉಳಿದಿರುವ ವೇತನವನ್ನು ಕಡ್ಡಾಯವಾಗಿ ಸ್ವಂತ ಸಂಪನ್ಮೂಲದಿಂದ ಪಾವತಿಸಲು ಸಿಇಒಗಳಿಗೆ ಸೂಚಿಸುವುದು.

ಎನ್​ಆರ್​ಇಜಿ ಡೇಟಾ ಎಂಟ್ರಿ ಅಪರೇಟರ್ಸ್​ ಸೇವೆಯನ್ನು 2006-07 ಸಾಲಿನಿಂದ ಪರಿಗಣಿಸುವ ಕುರಿತು ಪರಿಶೀಲಿಸಿ ವರದಿ ನೀಡುವುದು.

ಗ್ರಾಪಂ ಸಿಬ್ಬಂದಿ ಕರ್ತವ್ಯದಲ್ಲಿದ್ದಾಗ ಮರಣ ಹೊಂದಿದಲ್ಲಿ ಶವಸಂಸ್ಕಾರಕ್ಕಾಗಿ ಸಹಾಯಧನ ನಿಗದಿಪಡಿಸುವುದು.