ತಿ.ನರಸೀಪುರ: ವಿದ್ಯಾವಂತರೆಂಬ ಕಾರಣಕ್ಕೆ ಕೃಷಿಯಿಂದ ವಿಮುಖರಾಗುವ ಈ ಕಾಲದಲ್ಲಿ ಕೃಷಿಯೇ ನನ್ನ ಉದ್ಯೋಗ ಎಂಬ ಆಶಯದೊಂದಿಗೆ ಬದುಕು ಕಟ್ಟಿಕೊಳ್ಳಲು ಸ್ನಾತಕೋತ್ತರ ಪದವೀಧರ ನಡೆಸುತ್ತಿರುವ ಪ್ರಯತ್ನ ನಿಜಕ್ಕೂ ಮೆಚ್ಚುವಂತಹದ್ದು.
ತಾಲೂಕಿನ ಮೂಗೂರು ಗ್ರಾಮದ ನಿಕ್ಕಿ ಜೋಶಿ ಬಿ.ಕಾಂ. ಪದವೀಧರರಾಗಿದ್ದು, ಕೃಷಿ ಎಂದರೆ ಎಲ್ಲಿಲ್ಲದ ಪ್ರೀತಿ. ಮೈಸೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರು ಆರು ತಿಂಗಳು ಕೆಲಸ ಮಾಡಿ ಕಂಪನಿಯಲ್ಲಿ ದುಡಿಯಲು ಇಷ್ಟವಿಲ್ಲ ಹಾಗೂ ವೇತನ ಕಡಿಮೆ ಎಂಬ ಕಾರಣಕ್ಕೆ ಮತ್ತೆ ತನ್ನೂರಿನತ್ತ ಮುಖ ಮಾಡಿದ್ದಾರೆ. ಇದೀಗ ಕೃಷಿಯಿಂದ ಹೆಚ್ಚು ಹಣ ಸಂಪಾದಿಸಿ ನೆಮ್ಮದಿ ಕಂಡುಕೊಂಡಿದ್ದಾರೆ.
ಪ್ರಸ್ತುತ ಕಾಲಘಟ್ಟದಲ್ಲಿ ಒಳ್ಳೆಯ ಸರ್ಕಾರಿ ಕೆಲಸ ಗಿಟ್ಟಿಕೊಳ್ಳಬೇಕೆಂಬ ಹಠಕ್ಕೆ ಬಿದ್ದವರೇ ಹೆಚ್ಚು. ದುಡಿಮೆ ಹೆಸರಿನಲ್ಲಿ ರೈತರ ಮಕ್ಕಳು ಪಟ್ಟಣಕ್ಕೆ ದೌಡಾಯಿಸುತ್ತಿದ್ದಾರೆ. ಆದರೆ, ಇದಕ್ಕೆ ತದ್ವಿರುದ್ಧವೆಂಬಂತೆ ಇರುವ ಕೆಲಸವನ್ನೂ ತ್ಯಜಿಸಿ ಕೃಷಿಯಲ್ಲೇ ಹೆಚ್ಚು ಸಂಪಾದಿಸಬಹುದು ಎಂಬ ನಿರೀಕ್ಷೆಯೊಂದಿಗೆ ಹಳ್ಳಿಗೆ ಬಂದ ಯುವಕ ಈಗ ಲಕ್ಷಾಂತರ ರೂ. ಸಂಪಾದಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. 20 ಎಕರೆಗೂ ಹೆಚ್ಚು ಜಮೀನಿನಲ್ಲಿ ಬಾಳೆ, ಕಬ್ಬು, ಜೋಳ, ಭತ್ತ ಇತರ ಬೆಳೆಗಳನ್ನು ಬೆಳೆದು ಮಾದರಿ ಕೃಷಿಕನಾಗಿದ್ದಾರೆ.
ಆಯಾ ಹವಾಗುಣಕ್ಕೆ ತಕ್ಕಂತೆ ಬೆಳೆ ಬೆಳೆದು ಅಂದಿನ ಮಾರ್ಕೆಟ್ ದರಕ್ಕಿಂತ ಹೆಚ್ಚು ಬೆಲೆ ದೊರಕಿಸಿಕೊಳ್ಳುವ ಇವರ ವ್ಯವಸಾಯ, ಮಾರುಕಟ್ಟೆ ಕ್ರಮ ಗಮನಾರ್ಹ. ವ್ಯವಸಾಯದೊಂದಿಗೆ ಹೈನುಗಾರಿಕೆಗೂ ಆದ್ಯತೆ ನೀಡಲಾಗಿದ್ದು, ತೋಟದ ಪಕ್ಕದಲ್ಲಿ ಕೊಟ್ಟಿಗೆ ನಿರ್ಮಾಣ ಮಾಡಿ 10 ರಿಂದ 15 ಹಸು, ಕೋಳಿ ಸಾಕಣೆ ಮಾಡುತ್ತಿದ್ದಾರೆ. ನಿತ್ಯ 100 ರಿಂದ 120 ಲೀಟರ್ ಹಾಲನ್ನು ಡೇರಿಗೆ ಪೂರೈಕೆ ಮಾಡುವುದರ ಜತೆಗೆ ಜಮೀನಿಗೆ ಅಗತ್ಯವಿರುವ ರಸಗೊಬ್ಬರವನ್ನು ತಾವೆ ತಯಾರಿಸಿಕೊಂಡು ಕೃಷಿಗೆ ಬಳಸುತ್ತಿದ್ದಾರೆ. ಜಮೀನಿಗೆ ಬಳಸಿ ಮಿಕ್ಕ ಗೊಬ್ಬರವನ್ನು ಬೇರೆಯವರಿಗೂ ಮಾರಾಟ ಮಾಡುವ ಮೂಲಕ ಅಲ್ಪ ಸ್ವಲ್ಪ ಆದಾಯ ಕಂಡುಕೊಂಡಿದ್ದಾರೆ.
ಇದಲ್ಲದೆ ಕೋಳಿ ಸಾಕಣೆಯಿಂದ ತಿಂಗಳಿಗೆ 10 ರಿಂದ 25,000 ರೂ.ವರೆಗೆ ಸಂಪಾದಿಸುತ್ತಿದ್ದೇನೆ. ವ್ಯವಸಾಯ ಮತ್ತು ಹೈನುಗಾರಿಕೆಯಿಂದ ವರ್ಷಕ್ಕೆ 8ರಿಂದ 10 ಲಕ್ಷ ರೂ. ಸಂಪಾದಿಸುತ್ತಿದ್ದು, ಯಾವ ಐಟಿಬಿಟಿ ಕಂಪನಿ ಕೆಲಸಗಾರನಿಗೂ ಕಡಿಮೆ ಇಲ್ಲವೆಂಬಂತೆ ಲಾಭ ಕಂಡಿದ್ದೇನೆ ಎಂದು ನಿಕ್ಕಿ ಜೋಶಿ ವಿಜಯವಾಣಿಯೊಂದಿಗೆ ಸಂತಸ ಹಂಚಿಕೊಂಡರು.
ಎಂಕಾಂ ಪದವಿ ಮುಗಿಸಿ ಮೈಸೂರಿನ ಪ್ರತಿಷ್ಠಿತ ಟಾಟಾ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಿಕ್ಕಿ ತಿಂಗಳಿಗೆ 20 ರಿಂದ 30,000 ರೂ. ವೇತನ ಪಡೆಯುತ್ತಿದ್ದರು. ಕಡಿಮೆ ಸಂಬಳಕ್ಕೆ ದುಡಿಯುವ ಬದಲು ಕೃಷಿಯಲ್ಲಿ ಲಕ್ಷಾಂತರ ರೂ. ಸಂಪಾದಿಸಬಹುದೆಂಬ ಆಶಯದೊಂದಿಗೆ ಕೃಷಿಯತ್ತ ಮುಖ ಮಾಡಿದರು. ಇದೀಗ ಆ ಕನಸು ನನಸಾಗಿದೆ.
ಕೃಷಿಯೊಂದಿಗೆ ಉಪಕಸುಬುಗಳಾದ ವಿವಿಧ ತರಕಾರಿ ಬೆಳೆಗಳು, ಮೇಕೆ, ಬಂಡೂರು ಕುರಿ, ನಾಟಿ ಕೋಳಿ ಸಾಕಣೆ ..ಹೀಗೆ ಹಲವು ಕಸುಬನ್ನು ಅನುಸರಿಸುತ್ತಿದ್ದು, ತೋಟದಲ್ಲಿ ತಯಾರಾಗುವ ದನದ ಗೊಬ್ಬರವನ್ನು ಇತರ ರೈತರಿಗೂ ನೀಡುವ ಮೂಲಕ ಸಹಾಯಹಸ್ತ ಚಾಚುತ್ತಿದ್ದಾರೆ.
ತೋಟದಲ್ಲಿ ಟೊಮ್ಯಾಟೊ, ಹೀರೆಕಾಯಿ ಬೆಳೆಯುತ್ತಿದ್ದು, ಯಾವ ಐಟಿಬಿಟಿ ಕಂಪನಿಯ ಉದ್ಯೋಗಿಗೂ ಕಮ್ಮಿಯಿಲ್ಲ ಎಂಬಂತೆ ಕೃಷಿಯಲ್ಲಿ ಸಂಪಾದನೆ ಮಾಡುತ್ತಿದ್ದೇನೆ. ನಿತ್ಯ ತೋಟದಲ್ಲಿ ಕೃಷಿ ಚಟುವಟಿಕೆಯೊಂದಿಗೆ ಕುರಿ, ಮೇಕೆ, ಹಸು ಸಾಕಣೆ ಮಾಡುತ್ತೇನೆ. ಹಸು ಸಾಕಣಿಕೆಯಿಂದ ಸಾವಯವ ಗೊಬ್ಬರವೂ ಇಲ್ಲೇ ತಯಾರು ಮಾಡಿ ಭೂಮಿಗೆ ಹಾಕಲಾಗುತ್ತಿದೆ. ಇದರಿಂದ ಉತ್ತಮ ಬೆಳೆಬೆಳೆದು ಲಕ್ಷಾಂತರ ರೂ. ಸಂಪಾದನೆ ಆಗುತ್ತಿದೆ. ತಾತ-ಮುತ್ತಾತನ ಕಾಲದಿಂದಲೂ ನಮ್ಮದು ಕೃಷಿ ಅವಲಂಬಿತ ಕುಟುಂಬ. 20ರಿಂದ 25 ಎಕ್ಕರೆ ಜಮೀನು ನಮಗಿದ್ದು ಎಲ್ಲ ರೀತಿಯ ಬೆಳೆ ಬೆಳೆಯುತ್ತೇವೆ.
ನಿಕ್ಕಿ ಜೋಶಿ ಯುವ ಕೃಷಿಕ