ನ್ಯೂಸ್

ಕನ್ನಡ ಕಲಿಯುತ್ತಿರುವ ರಾಜ್ಯಪಾಲ ಗೆಹಲೋತ್: ವಿವಿಧ ನಿಘಂಟು ಖರೀದಿ

ಬೆಂಗಳೂರು: ಕರ್ನಾಟಕದ ರಾಜ್ಯಪಾಲ ಥಾವರಚಂದ್​ ಗೆಹಲೋತ್​ ಅವರು ಕನ್ನಡ ಕಲಿಯಲು ಮುಂದಡಿ ಇಟ್ಟಿದ್ದು, ಕನ್ನಡ ಕಲಿಕೆಗಾಗಿ ವಿವಿಧ ನಿಘಂಟುಗಳನ್ನು ತರಿಸಿಕೊಂಡಿದ್ದಾರೆ.

ಥಾವರಚಂದ್​ ಗೆಹಲೋತ್​ ಮಧ್ಯಪ್ರದೇಶದ ಮೂಲದವರು, ಕರ್ನಾಟಕ ರಾಜ್ಯದ ರಾಜ್ಯಪಾಲರಾಗಿ ಜುಲೈ 11 ರಂದು ಅಧಿಕಾರ ಸ್ವೀಕರಿಸಿದ ಗೆಹಲೋತ್​ ಅವರು, ಆಗಿನಿಂದಲೂ ಸದ್ದಿಲ್ಲದೆ ಕನ್ನಡ ಕಲಿಕೆಯನ್ನು ಆರಂಭಿಸಿದ್ದಾರೆಂದು ರಾಜಭವನದ ಮೂಲಗಳು ಹೇಳಿವೆ.

ಹಿಂದಿನ ರಾಜ್ಯಪಾಲರಾದ ವಜೂಬಾಯಿ ವಾಲಾ ಅವರು ರಾಜಭವನವನ್ನು ಸಂಪೂರ್ಣ ಹಿಂದಿಮಯ ಮಾಡಿದ್ದರು. ಈ ಹಿಂದೆ ರಾಜ್ಯಪಾಲರಾಗಿದ್ದ ವಿ.ಎಸ್​. ರಮಾದೇವಿ ಅವರು ಕನ್ನಡದಲ್ಲಿಯೇ ಮಾತನಾಡುತ್ತಿದ್ದರು. ಎಚ್​.ಆರ್​. ಭಾರದ್ವಾಜ್​ ರಾಜ್ಯಪಾಲರಾಗಿ ಬಂದ ಆರಂಭದಲ್ಲಿ ಕನ್ನಡ ಕಲಿಯುವುದಾಗಿ ಹೇಳಿಕೊಂಡಿದ್ದರು. ಆದರೆ, ಆ ಪ್ರಯತ್ನ ಮಾಡಲಿಲ್ಲ. ಈಗ ಗೆಹಲೋತ್​ ಅವರು ಕನ್ನಡ ಕಲಿಕೆಗಾಗಿ ವಿವಿಧ ನಿಘಂಟುಗಳನ್ನು ತರಿಸಿಕೊಂಡಿದ್ದಾರೆ.

ರಾಜಭವನದ ಅಧಿಕಾರಿ ಮತ್ತು ಸಿಬ್ಬಂದಿಯಿಂದ ಹೊಸಹೊಸ ಪದಗಳನ್ನು ಕೇಳಿ ತಿಳಿದುಕೊಂಡು ಕಲಿಯುವ ಪ್ರಯತ್ನ ಆರಂಭಿಸಿದ್ದಾರೆ. ರಾಜ್ಯದಲ್ಲಿನ ಸಭೆ, ಸಮಾರಂಭಗಳಲ್ಲಿ ಕನ್ನಡದಲ್ಲಿಯೇ ಮಾತನಾಡುವಂತಾಗಬೇಕು ಎಂಬುದು ರಾಜ್ಯಪಾಲರ ಆಸೆ ಎಂಬುದು ಮೂಲಗಳ ಮಾಹಿತಿ.