ನ್ಯೂಸ್

ಒಳ್ಳೆಯ ಕೆಲಸ, ಮಧುರ ಮಾತಿನಿಂದ ಜೀವನ ಸಾರ್ಥಕ

ವ್ಯಕ್ತಿತ್ವ ವಿಕಸನದ ಖ್ಯಾತ ಮಾರ್ಗದರ್ಶಕರು, ನಾರಾಯಣ ರೇಖಿ ಸತ್ಸಂಗ ಪರಿವಾರ ಟ್ರಸ್ಟ್​ನ (ಎನ್​ಆರ್​ಎಸ್​ಪಿ) ಸಂಸ್ಥಾಪಕರು ಮತ್ತು ಜನಜೀವನದಲ್ಲಿ ಅಧ್ಯಾತ್ಮದ ಸರಳ ಅನುಷ್ಠಾನಕ್ಕೆ ಶ್ರಮಿಸುತ್ತಿರುವ ಮುಂಬೈನ ರಾಜೇಶ್ವರಿ ಮೋದಿಯವರು ದೇಶ-ವಿದೇಶಗಳಲ್ಲಿ ‘ರಾಜ್ ದೀದಿ’ ಎಂದೇ ಖ್ಯಾತರು. ಜೀವನದ ಬಗೆಗೆ ಸಕಾರಾತ್ಮಕ ಚಿಂತನೆ ಮತ್ತು ಜೀವನಶೈಲಿಯಲ್ಲಿ ಕೆಲ ಮಾರ್ಪಾಡು ಮೂಲಕ ಸಾವಿರಾರು ಕುಟುಂಬಗಳು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಕಾರಣಿಕರ್ತರಾಗಿರುವ ರಾಜೇಶ್ವರಿ ಮೋದಿಯವರು ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದಾಗ ವಿಜಯವಾಣಿಗೆ ವಿಶೇಷ ಸಂದರ್ಶನ ನೀಡಿ, ಬದುಕಿನ ಹಲವು ಆಯಾಮಗಳ ಮೇಲೆ ಹೊಸ ಬೆಳಕು ಚೆಲ್ಲಿದರು.

ರವೀಂದ್ರ ಎಸ್. ದೇಶಮುಖ್
ದುಃಖದಿಂದ ಹೊರ ಬಂದು ಜೀವನ ಖುಷಿಯ ಖಜಾನೆಯಾಗಬೇಕೆ... ಒಳ್ಳೆಯ ಕೆಲಸ ಮಾಡಿ, ಎಲ್ಲರೊಂದಿಗೂ ಮಧುರವಾಗಿ ಮಾತನಾಡಿ, ಸೌಹಾರ್ದವಾಗಿ ವ್ಯವಹರಿಸಿ. ನೋಡಿ, ನಿಮ್ಮ ಜೀವನದಲ್ಲಿ ಅದ್ಭುತವಾದ ಬದಲಾವಣೆಯನ್ನು ಕಾಣುತ್ತೀರಿ, ಕುಟುಂಬದಲ್ಲಿ ಸುಖ, ಸಮೃದ್ಧಿ, ನೆಮ್ಮದಿ ನೆಲೆಸುತ್ತದೆ. ಹೀಗೆ ವಿಶ್ವಾಸದಿಂದ ಹೇಳಿದವರು ವ್ಯಕ್ತಿತ್ವ ವಿಕಸನದ ಖ್ಯಾತ ಮಾರ್ಗದರ್ಶಕರು ಮತ್ತು ನಾರಾಯಣ ರೇಖಿ ಸತ್ಸಂಗ ಪರಿವಾರ ಟ್ರಸ್ಟ್​ನ (ಎನ್​ಆರ್​ಎಸ್​ಪಿ) ಸಂಸ್ಥಾಪಕರಾದ ರಾಜೇಶ್ವರಿ ಮೋದಿ.

  • ಇಂದಿನವರ ಬದುಕು ಬಹು ಒತ್ತಡದಿಂದ ಕೂಡಿದೆಯಲ್ಲ. ಯುವಕರು ಖಿನ್ನತೆ, ಆತಂಕದಿಂದ ಬಳಲುತ್ತಿದ್ದಾರೆ. ಇದಕ್ಕೆಲ್ಲ ಪರಿಹಾರ?

- ಕಲಿಯುಗದಲ್ಲಿ ಇಲ್ಲೇ ಡ್ರಾ, ಇಲ್ಲೇ ಬಹುಮಾನ. ಈ ಜನ್ಮದಲ್ಲಿ ಮಾಡಿದ ಪಾಪಗಳಿಗೆ ಮುಂದಿನ ಜನ್ಮದಲ್ಲಿ ಕಷ್ಟ, ತೊಂದರೆ ಅನುಭವಿಸಬೇಕಾಗುತ್ತದೆ ಎಂಬುದಿಲ್ಲ. ಈ ಜನ್ಮದಲ್ಲಿ ಮಾಡಿದ್ದನ್ನು ಇದೇ ಜನ್ಮದಲ್ಲಿ ಅನುಭವಿಸಬೇಕು. ನಾವು ಮಾತಿನಿಂದ, ಕೃತಿಯಿಂದ ಯಾರಿಗಾದರೂ ನೋವು, ದುಃಖ ಉಂಟು ಮಾಡಿದರೆ, ಅದು ತಕ್ಷಣ ಪರಿಣಾಮ ಬೀರುತ್ತದೆ. ಅದೇ, ನಗುವನ್ನು ಹಂಚಿ, ಪ್ರೀತಿಯಿಂದ ಮಾತನಾಡಿದರೆ, ಅದೇ ನಿಮಗೆ ಬೇರೆಯವರಿಂದ ವಾಪಸ್ ಸಿಗುತ್ತದೆ. ನಾವು ಮುಖ್ಯವಾಗಿ, ಮಾತಿನ ಶಕ್ತಿಯನ್ನು ಅರಿತುಕೊಳ್ಳಲು ವಿಫಲವಾಗಿರುವುದರಿಂದಲೇ ಇಷ್ಟೊಂದು ಸಮಸ್ಯೆಗಳನ್ನು ಸೃಷ್ಟಿಸಿಕೊಂಡಿದ್ದೇವೆ.

ಒಳ್ಳೆಯ ಕರ್ಮಗಳನ್ನು ಮಾಡಿದರೆ ಪುಣ್ಯ, ಕೆಟ್ಟ ಕರ್ಮಗಳನ್ನು ಮಾಡಿದರೆ ಪಾಪ ಕಟ್ಟಿಟ್ಟ ಬುತ್ತಿ ಎಂದು ನಮ್ಮ ಶಾಸ್ತ್ರಗಳು ಬಹುಹಿಂದೆಯೇ ಹೇಳಿ, ಜೀವನಮಾರ್ಗ ಹೇಗಿರಬೇಕು ಎಂದು ತೋರಿಸಿಕೊಟ್ಟಿವೆ. ಆದರೆ, ಬಹುತೇಕರು, ಈ ಸಂಗತಿಯನ್ನು ಅಧ್ಯಾತ್ಮದ ಎತ್ತರದ ವಿಚಾರವೆಂದೋ ಅಥವಾ ಬಂದಾಗ ಅನುಭವಿಸಿದರಾಯಿತು ಎಂಬ ತಾತ್ಸಾರದಿಂದಲೂ ತಪು್ಪಗಳನ್ನು ಮಾಡುತ್ತಲೇ ಇರುತ್ತಾರೆ. ಆ ಬಳಿಕ ವಿಧಿಯನ್ನು, ದೇವರನ್ನು ಹಳಿಯುತ್ತಾರೆ. ನಾವು ತಪು್ಪ ಕೆಲಸ ಮಾಡಿ, ಒಳ್ಳೆಯ ಫಲ ಬಯಸಿದರೆ, ಅದು ಸಿಗಲು ಸಾಧ್ಯವೇ?

ಜೀವನಪದ್ಧತಿ, ಜೀವನಚಿಂತನೆ ಬದಲಾಗಬೇಕು. ಸಕಾರಾತ್ಮಕ ಚಿಂತನೆ ಅಳವಡಿಸಿಕೊಳ್ಳಬೇಕು, ಸಂಬಂಧಗಳನ್ನು ಉದ್ವಿಗ್ನತೆಯಿಂದಲ್ಲ, ಸೌಹಾರ್ದದಿಂದ ಎತ್ತರಿಸಿಕೊಳ್ಳಬೇಕು. ಈಗಿನ ಯುವಕರ ಸಮಸ್ಯೆಗಳಿಗೆ, ಅವರ ಜೀವನಶೈಲಿ ಯಲ್ಲಿನ ಪರಿವರ್ತನೆಯೇ ಪರಿಹಾರವಾಗಿದೆ.

  • ಸಂತೋಷದ ಹುಡುಕಾಟದಲ್ಲಿ ಬಹು ತೇಕರು ದುಃಖವನ್ನೇ ಆಹ್ವಾನಿಸುತ್ತಿದ್ದಾರಲ್ಲ?

-‘ನನಗೆ ಸಂತೋಷ ಬೇಕು’ ಎಂದರೆ, ಅದು ನಮ್ಮಿಂದ ಮತ್ತಷ್ಟು ದೂರವಾಗುತ್ತದೆ. ಬೇರೆಯವರ ಜೀವನದಲ್ಲಿ ತರುವ ಸಣ್ಣ ಖುಷಿಯು ನಮ್ಮ ಜೀವನವನ್ನೂ ಬದಲಾಯಿಸಿ ಬಿಡುತ್ತದೆ. ‘ನಾನು ಖುಷಿಯಾಗಿರಬೇಕು’ ಎಂಬುದರ ಬದಲಿಗೆ ‘ನಾವು ಖುಷಿಯಾಗಿ ಇರಬೇಕು’ ಎಂಬ ಸೂತ್ರ ಅಳವಡಿಸಿಕೊಂಡರೆ ಬದುಕು ಸುಲಭವಾಗುತ್ತದೆ.

  • ಸತ್ಸಂಗ ಪರಿವಾರದಿಂದ ಏನೆಲ್ಲ ಬದಲಾವಣೆ ತರುತ್ತಿದ್ದೀರಿ?

-ಮುಂಬೈಯಿಂದ ನಾವು ಇದನ್ನು ಸಣ್ಣ ಪ್ರಯತ್ನವಾಗಿ ಆರಂಭಿಸಿದೆವು. ಇದು ದೇಶಾದ್ಯಂತ, ಆ ಬಳಿಕ ವಿದೇಶಗಳಿಗೂ ಹರಡಿ, ದೊಡ್ಡ ಸಂಸ್ಥೆಯಾಗಿ ಮಾರ್ಪಡುತ್ತದೆ ಎಂಬ ಕಲ್ಪನೆ ನಮಗೂ ಇರಲಿಲ್ಲ. ಶರೀರದಲ್ಲಿನ ಶೇಕಡ 70-80 ರೋಗಗಳಿಗೆ ನಕಾರಾತ್ಮಕ ಚಿಂತನೆ, ನಕಾರಾತ್ಮಕ ಮಾತುಗಳೇ ಕಾರಣ. ಇದರಿಂದ, ಎಲ್ಲ ಕುಟುಂಬಗಳಲ್ಲಿ ಒಂದಲ್ಲ ಒಂದು ಸಮಸ್ಯೆ. ಹಾಗಾಗಿ, ಮುಖ್ಯವಾಗಿ ಕುಟುಂಬಗಳಲ್ಲಿ ಆಧ್ಯಾತ್ಮಿಕ ಚೈತನ್ಯವನ್ನು ಜಾಗೃತಗೊಳಿಸಲು ಎನ್​ಆರ್​ಎಸ್​ಪಿ ಕಾರ್ಯನಿರ್ವಹಿಸುತ್ತಿದೆ. ರೇಖಿ ಮತ್ತು ಅಕ್ಯುಪ್ರೆಶರ್ ಚಿಕಿತ್ಸಾ ವಿಧಾನದ ಜತೆಗೆ ರಾಮನಾಮ, ನಾರಾಯಣನಾಮ ಹೇಳಿಕೊಡುತ್ತೇವೆ. ಇದರಿಂದ ಸಾವಿರಾರು ಜನರ ನೋವು, ದುಃಖ, ಆಯಾಸ, ಮಾನಸಿಕ ಒತ್ತಡ ಕಡಿಮೆಯಾಗಿದೆ. ಮುಖ್ಯವಾಗಿ, ಕುಟುಂಬದಲ್ಲಿ ಸಂತೋಷದಿಂದ ಬದುಕುತ್ತಿದ್ದು, ಎಲ್ಲರ ಹಿತವನ್ನು ಬಯಸುತ್ತಿದ್ದಾರೆ. ಜತೆಗೆ, ಸಮಾಜಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಮನೆಗೆ, ಅವರ ಕುಟುಂಬಕ್ಕೆ ಸೀಮಿತವಾಗಿದ್ದ ಮಹಿಳೆಯರು ಹೊರ ಬಂದು ಸೇವೆ ಸಲ್ಲಿಸುತ್ತಿದ್ದಾರೆ.

  • ಮಹಿಳೆಯರು ಎಲ್ಲ ರಂಗಗಳಲ್ಲಿ ಮುಂದುವರಿದಿದ್ದರೂ, ಮಹಿಳಾ ಸಬಲೀಕರಣ ಪೂರ್ಣವಾಗಿ ಸಾಕಾರವಾಗಿಲ್ಲ, ಏಕೆ?

-ಮಹಿಳೆಯರು ತುಂಬ ಶಕ್ತಿವಂತರು ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಬದಲಾದ ಕಾಲಘಟ್ಟದಲ್ಲಿ ಉನ್ನತ ಶಿಕ್ಷಣ, ದುಡಿಮೆಯಿಂದ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಇದು ಒಂದು ಆಯಾಮದಲ್ಲಿ ಅಹಂಕಾರಕ್ಕೂ ಆಸ್ಪದ ಮಾಡಿಕೊಟ್ಟಿದ್ದು, ‘ನಾನೇಕೆ ಬೇರೆಯವರ ಮಾತು ಕೇಳಲಿ’ ಎಂಬ ಮನಸ್ಥಿತಿ ಸೃಷ್ಟಿಯಾಗಿದೆ. ಒಂದು ಕುಟುಂಬ ಎಂದ ಮೇಲೆ ಅಲ್ಲಿ ಪ್ರೀತಿ, ಸೌಹಾರ್ದ, ಸಂತಸ ಇವೆಲ್ಲ ಒಡಮೂಡಲು ಎಲ್ಲರ ಸಹಕಾರ ಅಗತ್ಯ. ಕುಟುಂಬಗಳ ವಿಷಯದಲ್ಲಿ ಕೇವಲ ಪುರುಷರನ್ನು ದೂರಿದರೆ ಪ್ರಯೋಜನವಿಲ್ಲ. ಮಹಿಳೆಯರು ಕೂಡ ಮನಸ್ಥಿತಿ ಬದಲಿಸಿಕೊಂಡು, ಜೀವನದಲ್ಲಿ ಒಂದಿಷ್ಟು ಹೊಂದಾಣಿಕೆ ಅಗತ್ಯ, ಅನಿವಾರ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಆನಂದ ಮತ್ತು ನೆಮ್ಮದಿಯಿಂದ ಬದುಕುವುದೇ ನಿಜವಾದ ಸಬಲೀಕರಣ.

  • ಸುಖಿ ಸಮಾಜ ಸ್ಥಾಪನೆಗಾಗಿ ಏನು ಸಂದೇಶ ನೀಡುತ್ತೀರಿ?

-ಬೇರೆಯವರು ಬದಲಾಗಲಿ, ಸಮಾಜ ಬದಲಾಗಲಿ ಎಂದು ಕಾಯುತ್ತ ಕೂರಬೇಡಿ. ಮೊದಲು ನೀವು ಬದಲಾಗಿ. ಕುಟುಂಬದಲ್ಲಿ ಅತ್ತೆಯೋ, ಸೊಸೆಯೋ ಆ ಪೈಕಿ ಒಬ್ಬರು ಬದಲಾದರೂ, ಪರಿವಾರದಲ್ಲಿನ ಕಲಹಗಳು ನಿಂತು, ಶಾಂತಿ ನೆಲೆಸುತ್ತದೆ. ಕುಟುಂಬದಲ್ಲಿ ಶಾಂತಿ ನೆಲೆಸಿದ ಬಳಿಕ ಮಾತ್ರ ಆಧ್ಯಾತ್ಮಿಕ ತತ್ತ್ವ ಜಾಗೃತವಾಗಲು ಸಾಧ್ಯ. ನಮ್ಮ ಆಂತರಿಕ ಬದಲಾವಣೆಯೊಂದಿಗೆ ಮಾತ್ರ ಈ ಪಯಣ ಆರಂಭವಾಗುತ್ತದೆ.

ನೆಮ್ಮದಿಯ ಜೀವನಕ್ಕೆ ರಾಜದೀದಿ ಮಂತ್ರ

  • ನಮ್ಮ ಮಾತು ಮಧುರವಾಗಿದ್ದರೆ, ಮನಸ್ಸು ಕೂಡ ಶುದ್ಧವಾಗುತ್ತದೆ. ಮಾತು ಕ್ರೋಧ, ಅಹಂಕಾರದಿಂದ ತುಂಬಿದ್ದರೆ ನಾಲಿಗೆಯಲ್ಲಿ ನೆಲೆಸಿರುವ ಸರಸ್ವತಿ ಮುನಿಸಿಕೊಳ್ಳುತ್ತಾಳೆ. ಎಲ್ಲಿ ಸರಸ್ವತಿ ಇರುವುದಿಲ್ಲವೋ, ಅಲ್ಲಿ ಲಕ್ಷ್ಮೀ ಬರಲು ಹಿಂಜರಿಯುತ್ತಾಳೆ.
  • ಮನುಷ್ಯನ ಬಳಿ ಸಮಯ, ಹಣ, ವಸ್ತುಗಳು ಅಲ್ಲದೆ ಸುಖ-ದುಃಖಗಳೂ ಇವೆ. ಆದರೆ, ನೀವು ಭಗವಂತನಿಗೆ ಏನು ನೀಡುತ್ತೀರೋ, ಅದರ 11 ಪಟ್ಟು ನಿಮಗೆ ವಾಪಸ್ ನೀಡುತ್ತಾನೆ.
  • ಪ್ರತಿನಿತ್ಯ ನಾವು ಯಾವ ಶಬ್ದಗಳನ್ನು ಉಪಯೋಗಿಸುತ್ತೇವೆಯೋ, ಅವುಗಳೇ ನಮ್ಮ ಜೀವನವನ್ನು ರೂಪಿಸುತ್ತವೆ. ಹಾಗಾಗಿ, ಮಾತಿನ ಶಕ್ತಿಯನ್ನು ಅರಿತುಕೊಳ್ಳಬೇಕು.
  • ಯಾರನ್ನೂ ದ್ವೇಷಿಸದೆ, ಅಸೂಯೆ ಪಡದೆ ಸಮಾಧಾನಚಿತ್ತದಿಂದ ಸಾಗಿದಂತೆ ಸಂತೋಷ ನಮ್ಮಲ್ಲಿ ಶಾಶ್ವತವಾಗಿ ನೆಲೆಸುತ್ತದೆ.

ರಾಮನಾಮದ ಸವಿ: ಅಯೋಧ್ಯೆಯಲ್ಲಿ ಜನವರಿ 22ರಂದು ಶ್ರೀರಾಮನ ಭವ್ಯ ಮಂದಿರ ಉದ್ಘಾಟನೆಯಾಗುತ್ತಿರುವ ನಿಮಿತ್ತ, ಇಡೀ ದೇಶ ರಾಮಮಯ ವಾಗಿದೆ. ಈ ಸಂದರ್ಭದಲ್ಲಿ ಎಲ್ಲರೂ ಅಯೋಧ್ಯೆಗೆ ಹೋಗಲು ಸಾಧ್ಯವಿಲ್ಲ. ಆದರೆ, ರಾಮನಾಮದ ಸ್ಮರಣೆಯೊಂದಿಗೆ, ಮಾನಸಿಕವಾಗಿ ನಾವು ಅಲ್ಲಿರಲು ಸಾಧ್ಯ. ಹಾಗಾಗಿ, ಎನ್​ಆರ್​ಎಸ್​ಪಿ ನಡೆಸುತ್ತಿರುವ ರಾಮನಾಮ ಅಭಿಯಾನದಲ್ಲಿ ದೇಶ ಮತ್ತು ವಿದೇಶದ ಸಾವಿರಾರು ಕುಟುಂಬಗಳು ಜೋಡಿಸಿಕೊಂಡಿವೆ. (ಜಠಿಠಿಟ://ಚ್ಟಚಢಚ್ಞ್ಟಜಿkಜಿಠ ಚಠಿಠಚ್ಞಜಟಚ್ಟಜಿಡಚ್ಟ.ಟಞ/) ಇದರಿಂದ ಸಾಧಕರು ವಿಶಿಷ್ಟ ಅನುಭವ ತಮ್ಮದಾಗಿಸಿಕೊಳ್ಳುತ್ತಿ ದ್ದಾರೆ. ಇದಲ್ಲದೆ, ರಾಮನಾಮವನ್ನು ಬರೆಯುವ ಕಾರ್ಯವು ಯಜ್ಞೋಪಾದಿಯಲ್ಲಿ ಸಾಗಿದೆ. ನಮ್ಮ ಅಂತಃಕರಣವನ್ನು ಶುದ್ಧಗೊಳಿಸುವ ಸಮರ್ಥ ಸಾಧನ ರಾಮನಾಮವೇ ಆಗಿದೆ. ದಿನದಿಂದ ದಿನಕ್ಕೆ ರಾಮನಾಮ ಸ್ಮರಣೆಯಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ವಣದ ಮೂಲಕ ರಾಮನ ಮೌಲ್ಯಗಳು ದೇಶದಲ್ಲಿ, ದೇಶವಾಸಿಗಳಲ್ಲಿ ಅನುಷ್ಠಾನಗೊಳ್ಳಬೇಕು ಎಂದು ರಾಜೇಶ್ವರಿ ಮೋದಿ ಹೇಳಿದರು.

ಸಮಾಜಮುಖಿ ಕಾರ್ಯಗಳು: ಕಳೆದ 30 ವರ್ಷಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ರಾಜೇಶ್ವರಿ ಮೋದಿ ದೇಶಾದ್ಯಂತ ಸತ್ಸಂಗ ಮತ್ತು ಸೆಮಿನಾರ್​ಗಳನ್ನು ಉಚಿತ ವಾಗಿ ನಡೆಸಿಕೊಡುತ್ತಿದ್ದಾರೆ. ಇವರ ಪತಿ ಕೂಡ ಸಮಾಜಸೇವಕರಾಗಿದ್ದು, ಇಬ್ಬರು ಗಂಡುಮಕ್ಕಳು ಹಾಗೂ ಇಬ್ಬರು ಸೊಸೆಯಂದಿರು ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2015ರಲ್ಲಿ ಮುಂಬೈಯಲ್ಲಿ ಸ್ಥಾಪನೆಗೊಂಡಿರುವ ನಾರಾಯಣ ರೇಖಿ ಸತ್ಸಂಗ ಪರಿವಾರ ಟ್ರಸ್ಟ್ ಬಡಮಕ್ಕಳಿಗೆ ಶಿಕ್ಷ, ವಿಧವೆಯರು ಮತ್ತು ವೃದ್ಧೆಯರಿಗೆ ಆರ್ಥಿಕ, ವೈದ್ಯಕೀಯ ನೆರವು ಒದಗಿಸುತ್ತಿದೆ. ‘ಖುಷಿಯೋ ಕಾ ಖಜಾನಾ’, ‘ಸತ್ಯಯುಗ ಕಾ ಸಫರ್’, ‘ಲಕ್ಷ್ಯಪ್ರಾಪ್ತಿ ಮಂತ್ರ’ ಈ ವಿಷಯಗಳ ಮೇಲೆ ದೇಶಾದ್ಯಂತ ವಿಶೇಷ ಉಪನ್ಯಾಸ ಮತ್ತು ಕಾರ್ಯಾಗಾರಗಳನ್ನು ಆಯೋಜಿಸ ಲಾಗುತ್ತಿದೆ. ರೇಖಿ ಮತ್ತು ಅಕ್ಯುಪ್ರೆಶರ್ ಚಿಕಿತ್ಸೆ ಕುರಿತಂತೆ ಆಸಕ್ತರಿಗೆ ಉಚಿತವಾಗಿ ಆನ್​ಲೈನ್-ಆಫ್​ಲೈನ್ ತರಬೇತಿ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಹಲವೆಡೆ ಸತ್ಸಂಗ ಪರಿವಾರದ ಶಾಖೆಗಳಿವೆ.