ನ್ಯೂಸ್

ಬಾಲಕರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಚಿನ್ನದಂಗಡಿ ಮಾಲೀಕ: ಐಟಿ ದಾಳಿ ವೇಳೆ ಬೆಳಕಿಗೆ

ಬೆಂಗಳೂರು: ಆದಾಯ ತೆರಿಗೆ (ಐ.ಟಿ.) ಇಲಾಖೆ ಅಧಿಕಾರಿಗಳು, ಆದಾಯ ತೆರಿಗೆ ವಂಚನೆ ಆರೋಪದ ಮೇಲೆ ಇತ್ತೀಚೆಗೆ ಚಿನ್ನಾಭರಣ ಅಂಗಡಿ ಮಾಲೀಕನ ಮನೆ ಮೇಲೆ ದಾಳಿ ನಡೆಸಿದಾಗ ಬಾಲ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಸಂಗತಿ ಬಯಲಾಗಿದ್ದು, ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜಯನಗರದ ೯ಕ್ಕೂ ಹೆಚ್ಚು ಚಿನ್ನಾಭರಣ ಮಳಿಗೆಗಳ ಮೇಲೆ ನಾಲ್ಕೈದು ದಿನಗಳ ಹಿಂದೆ ದಾಳಿ ನಡೆಸಿದ್ದರು. ಅಲ್ಲದೆ, ಆ ಮಳಿಗೆಗಳ ಮಾಲೀಕರು, ಸಂಬಂಧಿಕರು ಮತ್ತು ಆಪ್ತರ ಮನೆಗಳ ಮೇಲೂ ದಾಳಿ ಮಾಡಿದ್ದರು.
ಯಡಿಯೂರಿನ ಸಾಕಮ್ಮ ಗಾರ್ಡನ್‌ನಲ್ಲಿರುವ ಅಶೋಕ್‌ಕುಮಾರ್ ಎಂಬ ಚಿನ್ನಾಭರಣ ವ್ಯಾಪಾರಿಯ ಮನೆಯಲ್ಲಿ ಐ.ಟಿ. ಅಧಿಕಾರಿಗಳು ಪರಿಶೀಲನೆ ಮಾಡುವಾಗ ೮ ವರ್ಷದ ಮತ್ತು ೧೦ ವರ್ಷದ ಇಬ್ಬರು ಹೆಣ್ಣು ಮಕ್ಕಳು ಪತ್ತೆಯಾಗಿದ್ದರು. ಈ ಸಂಬಂಧ ಐ.ಟಿ. ಅಧಿಕಾರಿಗಳು ಜಯನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಅಶೋಕ್‌ಕುಮಾರ್ ಅವರ ಮನೆಗೆ ಹೋಗಿ ತನಿಖೆ ಮಾಡಿದಾಗ ಆ ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದ ಸಂಗತಿ ದೃಢಪಟ್ಟಿದೆ. ಅಶೋಕ್‌ಕುಮಾರ್ ಪತ್ನಿಯು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು, ಅವರ ಆರೈಕೆಗೆ ಮತ್ತು ಮನೆಗೆಲಸಕ್ಕೆ ಅಪ್ರಾಪ್ತ ಹೆಣ್ಣು ಮಕ್ಕಳನ್ನು ನೇಮಿಸಿಕೊಳ್ಳಲಾಗಿತ್ತು. ಆ ಹೆಣ್ಣು ಮಕ್ಕಳು ಬಿಹಾರ ಮೂಲದವರಾಗಿದ್ದು, ಅವರ ಪಾಲಕರು ಮೈಸೂರಿನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಅಶೋಕ್‌ಕುಮಾರ್‌ರ ಮಕ್ಕಳಾದ ಶ್ರೇಯನ್ಸ್ ಚೌದರೆ ಮತ್ತು ಗೌರವ್ ಚೌದರೆ ಅವರು ಆ ಹೆಣ್ಣು ಮಕ್ಕಳನ್ನು ಮೈಸೂರಿನಿಂದ ಕರೆದುಕೊಂಡು ಬಂದಿದ್ದರು. ಆ ಮಕ್ಕಳನ್ನು ರಕ್ಷಿಸಿ ಸಿದ್ದಾಪುರದ ಬಾಲ ಮಂದಿರಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಕ್ಕಳನ್ನು ಕಾನೂನುಬಾಹಿರವಾಗಿ ಮನೆಗೆಲಸಕ್ಕೆ ನೇಮಿಸಿಕೊಂಡಿದ್ದ ಅಶೋಕ್‌ಕುಮಾರ್, ಶ್ರೇಯನ್ಸ್ ಮತ್ತು ಗೌರವ್ ವಿರುದ್ಧ ಬಾಲ ಕಾರ್ಮಿಕ ನಿಷೇಧ ಹಾಗೂ ನಿಯಂತ್ರಣ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಮಕ್ಕಳ ಪಾಲಕರಿಗೆ ಮಾಹಿತಿ ನೀಡಲಾಗಿದ್ದು, ಅವರು ನಗರಕ್ಕೆ ಬಂದ ನಂತರ ಹೆಚ್ಚಿನ ವಿಚಾರಣೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.