ನ್ಯೂಸ್

ಮಾದಪ್ಪ ಮೆಚ್ಚುವಂತಹದ್ದು ನೌಕರನ ಪ್ರಾಮಾಣಿಕತೆ! ವಸತಿಗೃಹದಲ್ಲಿ ಸಿಕ್ಕ 100 ಗ್ರಾಂ ಚಿನ್ನ ಕೊನೆಗೂ ಮಾಲೀಕರ ಕೈ ಸೇರಿತು

ಚಾಮರಾಜನಗರ: ರಸ್ತೆಯಲ್ಲಿ ಸಿಕ್ಕ 1 ರೂಪಾಯಿಯನ್ನೇ ಹಿಂದಿರುಗಿಸದ ಈ ದಿನಮಾನದಲ್ಲಿ ಬರೋಬ್ಬರಿ 100 ಗ್ರಾಂ ಚಿನ್ನದ ಸರ ಕಳೆದುಕೊಂಡವರನ್ನು ಹುಡುಕಿ ವಾಪಸ್​ ಕೊಟ್ಟು ನೌಕರನೊಬ್ಬ ಪ್ರಾಮಾಣಿಕತೆ ಮೆರೆದ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದಿದೆ.

ಮೇ 3ರಂದು ಬೆಟ್ಟಕ್ಕೆ ಬಂದಿದ್ದ ಮೈಸೂರಿನ ಸಾಫ್ಟ್‌ವೇರ್ ಇಂಜಿನಿಯರ್ ಎಂ.ರಾಜಶೇಖರ ಕುಟುಂಬ ಜೇನುಮಲೆ ವಸತಿಗೃಹದಲ್ಲಿ ತಂಗಿತ್ತು. ಟೆಕ್ಕಿ ಪತ್ನಿ ದೇವರ ದರ್ಶನ ಮುಗಿಸಿ ಕೊಠಡಿ ಖಾಲಿ ಮಾಡಿ ತೆರಳುವಾಗ ಮಾಂಗಲ್ಯ ಸರವನ್ನು ಬೀಳಿಸಿಕೊಂಡು ಹೋಗಿದ್ದರು. ಬಳಿಕ ಈ ಸರವು ರಿಸೆಪ್ಶನಿಸ್ಟ್ ಕೈಗೆ ಸಿಕ್ಕಿದೆ. ಕೊಠಡಿ ಪಡೆಯುವಾಗ ಗ್ರಾಹಕರು ಕೊಟ್ಟಿದ್ದ ದೂರವಾಣಿ ಸಂಪರ್ಕಕ್ಕೆ ಕರೆ ಮಾಡಿದ ಪ್ರಾಧಿಕಾರದ ನೌಕರ ಕೃಷ್ಣಮೂರ್ತಿ ಅವರು ಆ ಟೆಕ್ಕಿಯನ್ನು ಪತ್ತೆ ಹಚ್ಚಿ ಮಾಂಗಲ್ಯ ಸರವನ್ನು ಹಿಂತಿರುಗಿಸಿದ್ದಾರೆ‌. ನೌಕರನ ಪ್ರಾಮಾಣಿಕತೆಗೆ ಪ್ರಾಧಿಕಾರದಿಂದ ಶ್ಲಾಘನೆ ವ್ಯಕ್ತವಾಗಿದೆ‌.