ಮಧ್ಯಪ್ರದೇಶ: ಆಕೆ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಏಕಾಏಕಿ ಆತನಿಗೆ ತನ್ನ ಹುಡುಗಿ ಈ ಹಿಂದೆ ಬೇರೊಬ್ಬನನ್ನು ಪ್ರೀತಿಸುತ್ತಿದ್ದ ವಿಚಾರ ಗೊತ್ತಾಗಿದೆ. ಇದರಿಂದ ಸಿಟ್ಟಾದ ಯುವಕ ಸತ್ಯ ವಿಚಾರ ಏನೆಂದು ಗೊತ್ತಾಗಬೇಕೆಂಬ ಕಾರಣಕ್ಕೆ ಆಕೆಯ ಮಾಜಿ ಪ್ರಿಯಕರನೊಂದಿಗೆ ಯುವತಿಯ ಮನೆಗೆ ಬಂದಿದ್ದಾನೆ.
ಯುವತಿಯ ಮನೆಯಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಇಬ್ಬರು ಯುವಕರು ಯುವತಿಯನ್ನು ಥಳಿಸಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಆಕೆ ಮನೆಯ ವಠಾರದಲ್ಲಿದ್ದ ಬಾವಿಗೆ ಹಾರಿದ್ದಾಳೆ. ಈ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಡೆದಿದೆ.
ವರದಿಯ ಪ್ರಕಾರ, ಐದು ಜನರು ಚಾಕು ಹಾಗೂ ದೊಣ್ಣೆಗಳನ್ನು ಹಿಡಿದುಕೊಂಡು ಯುವತಿಯ ಮನೆಗೆ ಬಂದಿದ್ದಾರೆ. ಅದರಲ್ಲಿ ಇಬ್ಬರು ಆಕೆಯನ್ನು ನಿಂದಿಸಿ, ಹಲ್ಲೆ ಮಾಡಲು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ. ಜಿಲ್ಲೆಯ ಬೋರ್ಡೆಹಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಘಟನೆಯ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಯುವಕರು ಬಂದು ದಾಂಧಲೆ ಎಬ್ಬಿಸಿ, ಹಲ್ಲೆ ಮಾಡಿದಾಗ ಅವರಿಂದ ತಪ್ಪಿಸಿಕೊಳ್ಳಲೆಂದು ಯುವತಿ ಬಾವಿಗೆ ಹಾರಿದ್ದಾಳೆ. ಕೂಡಲೇ ಆಕೆಯನ್ನು ಮೇಲೆತ್ತಿ, ಬೋರ್ಡೆಹಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಆದರೆ ಆರೋಗ್ಯ ಸ್ಥಿತಿ ಹದಗೆಟ್ಟ ಕಾರಣ ಜಿಲ್ಲಾ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಯಿತು. ಸದ್ಯ ಯುವತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿರುವುದು ವರದಿಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಯುವತಿಯ ಮನೆಯೊಳಗೆ ನುಗ್ಗಿದ ಇಬ್ಬರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವತಿ ತನ್ನ ಮಾಜಿ ಪ್ರಿಯಕರನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಳು. ಇದು ಆತನ ಕೋಪಕ್ಕೆ ಕಾರಣವಾಗಿತ್ತು. ಸದ್ಯ ಬಂಧನವಾಗಿರುವ ಇಬ್ಬರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. (ಏಜೆನ್ಸೀಸ್)