ವಾಷಿಂಗ್ಟನ್: ಹದಿಮೂರು ಶತಕೋಟಿ ವರ್ಷದ ಹಿಂದೆ ಜಗತ್ತು ಹೇಗಿತ್ತು? ಆಗಸದಲ್ಲಿ ನಕ್ಷತ್ರಪುಂಜಗಳು ಹೇಗಿದ್ದವು ಎಂಬ ಕುತೂಹಲಕ್ಕೆ ಉತ್ತರದ ನಿಟ್ಟಿನಲ್ಲಿ ಪ್ರಮುಖ ಬೆಳವಣಿಗೆ ನಡೆದಿದೆ. ವಿಶ್ವದ ಪ್ರಬಲ ಟೆಲಿಸ್ಕೋಪ್, ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಜೇಮ್್ಸ ವೆಬ್ ಸ್ಪೇಸ್ ಟೆಲಿಸ್ಕೋಪ್, ಎಸ್ಎಂಎಸಿಎಸ್0723 ಹೆಸರಿನ ನಕ್ಷತ್ರಪುಂಜ ಸಮೂಹದ ಚಿತ್ರವನ್ನು ಜುಲೈ 12ರಂದು ಸೆರೆಹಿಡಿದು ಕಳುಹಿಸಿದೆ. ಇದು, ವಿಶ್ವದ ಸೃಷ್ಟಿಗೆ ಕಾರಣವಾದ ಬಿಗ್ಬ್ಯಾಂಗ್ (ಮಹಾಸ್ಪೋಟ) ಬಳಿಕ ಆರಂಭದಲ್ಲಿ ಅಂದರೆ ಸುಮಾರು 13 ಶತಕೋಟಿ ವರ್ಷಗಳ ಹಿಂದೆ ಸೃಷ್ಟಿಯಾದ ಗ್ಯಾಲಕ್ಸಿಯ ಚಿತ್ರ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ನಕ್ಷತ್ರಪುಂಜದ ಸಮೂಹವು ಅಗಾಧ ಆಕಾಶದ ಅತಿ ಸೂಕ್ಷ್ಮ ಅಥವಾ ಚಿಕ್ಕ ಭಾಗವಾಗಿದೆ ಎಂದು ನಾಸಾದ ಆಡಳಿತಾಧಿಕಾರಿ ಬಿಲ್ ನೆಲ್ಸನ್ ತಿಳಿಸಿದ್ದಾರೆ.
ಇನ್ಫ್ರಾರೆಡ್ ಕ್ಯಾಮರಾ: ಫೋಟೊವನ್ನು ವೆಬ್ ದೂರದರ್ಶಕದ ಇನ್ಫ್ರಾರೆಡ್ ಕ್ಯಾಮರಾದಿಂದ, ಬೆಳಕಿನ ವಿವಿಧ ತರಂಗಾಂತರಗಳಲ್ಲಿ ಹನ್ನೆರಡೂವರೆ ಗಂಟೆಗಳ ಅವಧಿಯಲ್ಲಿ ಸೆರೆ ಹಿಡಿಯಲಾಗಿದೆ. 100 ಕೋಟಿ ಡಾಲರ್ ವೆಚ್ಚದಲ್ಲಿ ನಿರ್ವಿುಸಲಾಗಿರುವ ಈ ಟೆಲಿಸ್ಕೋಪ್, 6 ತಿಂಗಳ ತಯಾರಿ ಬಳಿಕ ಈ ಫೋಟೊ ಕಳುಹಿಸಿದೆ. ಇದು ಅಂತರಿಕ್ಷದಲ್ಲಿ 10 ವರ್ಷಗಳ ಕಾಲ ಕಾರ್ಯ ನಿರ್ವಹಣೆ ಮಾಡಲಿದೆ ಎಂದು ನಾಸಾ ಅಂದಾಜಿಸಿತ್ತು. ಇದೀಗ ಈ ದೂರದರ್ಶಕದಲ್ಲಿ ಸಾಕಷ್ಟು ಇಂಧನ ಇರುವ ಕಾರಣ 20 ವರ್ಷಗಳ ಕಾಲ ಕಾರ್ಯ ನಿರ್ವಹಣೆ ಮಾಡಲಿದೆ ಎಂದು ಅಂದಾಜಿಸಲಾಗಿದೆ.
ಐತಿಹಾಸಿಕ ಕ್ಷಣ: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಚಿತ್ರವನ್ನು ಶ್ವೇತಭವನದಲ್ಲಿ ಬಿಡುಗಡೆ ಮಾಡಿದ್ದು, ಇದು ಐತಿಹಾಸಿಕ ದಿನ ಎಂದು ಬಣ್ಣಿಸಿದ್ದಾರೆ. ಚಿತ್ರವು ನೂರಾರು ಚುಕ್ಕೆಗಳು, ಗೆರೆಗಳು, ಸುರುಳಿಗಳು, ಬಿಳಿ, ಹಳದಿ, ಕಿತ್ತಳೆ ಮತ್ತು ಕೆಂಪುಬಣ್ಣದ ಸುಳಿಗಳನ್ನು ಹೊಂದಿದ್ದು, ಚಿತ್ರವು ಬ್ರಹ್ಮಾಂಡದ ಒಂದು ಚಿಕ್ಕ ಚುಕ್ಕೆ ಎಂದು ನಾಸಾದ ಬಿಲ್ ನೆಲ್ಸನ್ ತಿಳಿಸಿದ್ದಾರೆ. ಪೂರ್ಣ ಪ್ರಮಾಣದ ಕಲರ್ ಚಿತ್ರವನ್ನು ನಾಸಾವು ಮೇರಿಲ್ಯಾಂಡ್ನಲ್ಲಿರುವ ಗೊಡ್ವಾಡ್ ಸ್ಪೇಸ್ ಫ್ಲೈ ಸೆಂಟರ್ನಲ್ಲಿ ಬಿಡುಗಡೆ ಮಾಡಲಿದೆ.