ನ್ಯೂಸ್

ನಿನ್ನೆ ರಾತ್ರಿ ತೋಟದ ಮನೆಯಲ್ಲಿ 3 ತಿಂಗಳ ಮಗು, ದಂಪತಿ ದುರಂತ ಸಾವು! ಬೆಚ್ಚಿಬಿದ್ದ ಗ್ರಾಮಸ್ಥರು

ಗಜೇಂದ್ರಗಡ: 3 ತಿಂಗಳ ಮಗು ಹಾಗೂ ಪತ್ನಿಗೆ ನೇಣುಬಿಗಿದು ಬಳಿಕ ಗಂಡನೂ ನೇಣಿಗೆ ಕೊರಳೊಡ್ಡಿ ಮೃತಪಟ್ಟ ಧಾರುಣ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನಾಗೇಂದ್ರಗಡ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.

ಗ್ರಾಮದ ಮಲ್ಲಪ್ಪ ಗಡಾದ(30), ಇವರ ಪತ್ನಿ ಸುಧಾ(24) ಹಾಗೂ 3 ತಿಂಗಳ ಮಗು ರೂಪಾಶ್ರೀ ಮೃತ ದುರ್ದೈವಿಗಳು. ಜಮೀನನಲ್ಲಿದ್ದ ಮನೆಯಲ್ಲಿ ಮೂವರ ಶವಗಳು ನೇತಾಡುತ್ತಿದ್ದ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ದೀಪಾವಳಿ ಹಬ್ಬದ ರಾತ್ರಿಯೇ ನಡೆದ ಈ ದುರಂತ ಗ್ರಾಮವನ್ನೇ ಬೆಚ್ಚಿಬೀಳಿಸಿದೆ.

2 ವರ್ಷದ ಹಿಂದೆ ಮಲ್ಲಪ್ಪ ಮತ್ತು ಸುಧಾ ಮದುವೆಯಾಗಿದ್ದರು. ದಂಪತಿಗೆ 3 ತಿಂಗಳ ಹೆಣ್ಣು ಮಗು ಕೂಡ ಇತ್ತು. ಬೆಡ್ ರೂಮ್​ನಲ್ಲಿ ಸುಧಾ ಮತ್ತು ಮಗು ಶವ ನೇಣುಬಿಗಿದ ಸ್ಥಿತಿಯಲ್ಲಿ ಇದ್ದರೆ, ಮಲ್ಲಪ್ಪನ ಶವ ಮನೆಯ ಹಾಲ್​ನಲ್ಲಿ ನೇತಾಡುತ್ತಿತ್ತು. ಮಲ್ಲಪ್ಪನೇ ಪತ್ನಿ ಹಾಗೂ ಮಗುವನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಕೌಟುಂಬಿಕ ಕಲಹವೇ ಕಾರಣ ಎಂದು ಶಂಕಿಸಲಾಗಿದೆ. ಗಜೇಂದ್ರಗಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.