ನ್ಯೂಸ್

ಗದಗ ಸಾರಿಗೆ ಟಿಕೆಟ್​ನಲ್ಲಿ 'ಮಹಾರಾಷ್ಟ್ರದ ಚಿಹ್ನೆ'!

ಗದಗ: 'ಮಹಾರಾಷ್ಟ್ರ ರಾಜ್ಯ ಪರಿವಾಹನ, ಜೈ ಮಹಾರಾಷ್ಟ್ರ' ಎಂಬ ಚಿಹ್ನೆ ಮುದ್ರಿತ ಟಿಕೆಟ್ ​ಅನ್ನು ಪ್ರಯಾಣಿಕರಿಗೆ ವಿತರಿಸಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗದಗ ಘಟಕದ ಅಧಿಕಾರಿಗಳು ಪೇಚಿಗೆ ಸಿಲುಕಿದ್ದಾರೆ.

ವಿಜಯದಶಮಿ ಹಬ್ಬದ ದಿನದಂದು(ಬುಧವಾರ) ಗದಗ ಘಟಕದ ಟಿಕೆಟ್​ನಲ್ಲಿ ಈ ಅವಾಂತರವಾಗಿದ್ದು, ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮುಂಡರಗಿ ತಾಲೂಕಿನ ಡೋಣಿ ಗ್ರಾಮದಿಂದ ಗದಗ ನಗರಕ್ಕೆ ಬುಧವಾರ ಬರುತ್ತಿದ್ದ ವಾಯವ್ಯ ಸಾರಿಗೆ ಬಸ್​ನಲ್ಲಿ ಪ್ರಯಾಣಿಕರಿಗೆ 'ಜೈ ಮಹಾರಾಷ್ಟ್ರ' ಎಂದು ಮುದ್ರಿಸಿರುವ ಟಕೆಟ್​ ವಿತರಿಸಲಾಗಿದೆ. ಟಿಕೆಟ್​ನ​ ಮಧ್ಯಭಾಗದಲ್ಲಿ ಕರ್ನಾಟಕದ ಹೆಸರು ಮತ್ತು ಕೆಎಸ್​ಆರ್​ಟಿಸಿ ಚಿಹ್ನೆಯನ್ನು ಮುದ್ರಿಸುವ ಸ್ಥಳದಲ್ಲಿ 'ಜೈ ಮಹಾರಾಷ್ಟ್ರ' ಎಂದಿದೆ. ಈ ಟಿಕೆಟ್​ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಸಾರಿಗೆ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಕನ್ನಡ ಪರ ಸಂಟನೆಗಳು ಹಾಗೂ ಜನರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸಾರಿಗೆ ಘಟಕದ ಮುಂದೆ ಪ್ರತಿಭಟನೆ ನಡೆಸಿ, ತಪ್ಪಿತಸ್ಥ ಅಧಿಕಾರಿಯನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಾರಿಗೆ ಇಲಾಖೆ ನಿಯಂತ್ರಕ ಬಸವರಾಜ, ಕರ್ನಾಟಕ ಹಾಗೂ ಮಹಾರಾಷ್ಟ್ರ ಸಾರಿಗೆ ಇಲಾಖೆಗಳಿಗೆ ಆಂಧ್ರಪ್ರದೇಶದ ಖಾಸಗಿ ಕಂಪನಿಯೊಂದು ಟಿಕೆಟ್​ ರೋಲ್​ಮುದ್ರಿಸಿ ಪೂರೈಸುತ್ತಿದೆ. ಮಹಾರಾಷ್ಟ್ರಕ್ಕೆ ಪೂರೈಕೆ ಆಗಬೇಕಿದ್ದ ಬಾಕ್ಸ್​ನಲ್ಲಿ ಒಂದು ಬಾಕ್ಸ್​ ಗದಗ ನಗರಕ್ಕೆ ಪೂರೈಕೆಯಾಗಿದೆ. ಇದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಆದರೆ, ಇದೀಗ ಟಿಕೆಟ್​ ಬದಲಿಸಲಾಗಿದೆ ಎಂದಿದ್ದಾರೆ.