ಶಿವಮೊಗ್ಗ:ಕೃತಕ ಬುದ್ಧಿಮತ್ತೆ (ಎಐ)ಯ ಈ ಯುಗದಲ್ಲಿ ಕೇವಲ ಉದ್ಯೋಗವನ್ನು ನಂಬಿಕೊಂಡು ಜೀವನ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಕಾಲಘಟ್ಟಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳಬೇಕು. ಒಕ್ಕಲಿಗರು ಕೃಷಿ ಜತೆಗೆ ಬೇರೆ ಉದ್ಯಮಗಳಲ್ಲೂ ತೊಡಗಿಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಸಂಸ್ಥಾನದ ಮಠಾಧೀಶ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ರಾಷ್ಟ್ರಕವಿ ಕುವೆಂಪು ಹೆಸರಿನಲ್ಲಿ ಫಸ್ಟ್ ಸರ್ಕಲ್‌ನ ಶಿವಮೊಗ್ಗ ಜಿಲ್ಲಾ ಘಟಕ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ನಾವೀಗ ಎಐ ಮೂಲಕ ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿದ್ದೇವೆ. ಎಐ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದೆ. ಹೀಗಾಗಿ ಭವಿಷ್ಯದಲ್ಲಿ ನಮ್ಮ ಮಕ್ಕಳು ಸಂಕಷ್ಟ ಎದುರಿಸಬೇಕಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಈ ಹಿಂದೆ 25-30 ವರ್ಷಗಳಿಗೆ ಒಂದು ತಲೆಮಾರು ಎಂದು ಹೇಳಲಾಗುತ್ತಿತ್ತು. ಈಗ 4-5 ವರ್ಷಗಳಿಗೇ ಒಂದು ತಲೆಮಾರು ಎನ್ನುವ ಸ್ಥಿತಿ ಬಂದಿದೆ. ಜಗತ್ತು ವೇಗವಾಗಿ ಬದಲಾಗುತ್ತಿದೆ. ಬಲಾಢ್ಯರು ಮಾತ್ರ ಬದುಕುಳಿಯಬಲ್ಲರು ಎಂಬ ಡಾರ್ವಿನ್‌ನ ಸಿದ್ಧಾಂತ ಈಗ ಹೆಚ್ಚು ಅನ್ವಯವಾಗುತ್ತಿದೆ. ಈ ಸಂದರ್ಭದಲ್ಲಿ ಫಸ್ಟ್ ಸರ್ಕಲ್ ಮೂಲಕ ಒಕ್ಕಲಿಗ ಉದ್ಯಮಿಗಳನ್ನು ಒಂದೆಡೆ ಸೇರಿಸುವ, ಅವರ ವ್ಯವಹಾರಗಳಿಗೆ ಸೂಕ್ತ ಸಲಹೆ, ಸಹಕಾರ ನೀಡುವ ಪ್ರಯತ್ನ ಅತ್ಯುತ್ತಮವಾಗಿದೆ. ಇದರಿಂದ ಒಕ್ಕಲಿಗ ಸಮುದಾಯದಲ್ಲಿ ಹೊಸ ಉದ್ಯಮಿಗಳು ಹೊರಬರಲು ಸಾಧ್ಯವಾಗಲಿದೆ ಎಂದು ಹೇಳಿದರು.
ಫಸ್ಟ್ ಸರ್ಕಲ್ ಅಧ್ಯಕ್ಷ ನಂದೀಶ್ ರಾಜೇಗೌಡ ಮಾತನಾಡಿ, ಫಸ್ಟ್ ಸರ್ಕಲ್‌ನಿಂದ ರೂಪಿಸಲಾಗಿರುವ ಆ್ಯಪ್ ಕುರಿತು ವಿವರಣೆ ನೀಡಿದರು. ಅದರಿಂದ ಸಮುದಾಯದ ಸಂಘಟನೆ, ಒಕ್ಕಲಿಗ ಉದ್ಯಮಿಗಳಿಗೆ ಆಗಬಹುದಾದ ಅನುಕೂಲಗಳ ಬಗ್ಗೆ ತಿಳಿಸಿದರು.
ಆದಿಚುಂಚನಗಿರಿ ಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸಿರಿಬೈಲು ಧರ್ಮೇಶ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಎ.ರಮೇಶ ಹೆಗ್ಡೆ, ರಾಮಕೃಷ್ಣ ವಿದ್ಯಾನಿಕೇತನದ ಕಾರ್ಯದರ್ಶಿ ಶೋಭಾ ವೆಂಕಟರಮಣ, ಚಿಕ್ಕಮಗಳೂರಿನ ಡಾ. ಕೃಷ್ಣೇಗೌಡ ಉಪಸ್ಥಿತರಿದ್ದರು.
ನಾವು ದೇಶ ಆಳಿದವರು: ನಮ್ಮ ಸಮುದಾಯದಿಂದ ಕವಿಗಳು, ಜ್ಞಾನಿಗಳು ಹೊರಬಂದಿದ್ದಾರೆ. ನಾಡನ್ನಾಳುವವರು ಉದಯಿಸಿದ್ದಾರೆ. ಈಗ ಉದ್ಯಮಿಗಳೂ ಉದಯಿಸುತ್ತಿದ್ದಾರೆ. ನೇಗಿಲು ಹಿಡಿದು ಉಳುಮೆ ಮಾಡಿದ ಒಕ್ಕಲಿಗರು ಖಡ್ಗ ಹಿಡಿದು ನಾಡನ್ನಾಳಿದ್ದಾರೆ. ದೇವೇಗೌಡರು ದೇಶವನ್ನೇ ಆಳಿದರು. ಹಲವು ಸಿಎಂಗಳನ್ನು ನೀಡಿದ ಸಮಾಜ ನಮ್ಮದು. ಮುಂದೆ ಇನ್ನಷ್ಟು ಸಿಎಂಗಳನ್ನು ನಾವು ನೀಡಲಿದ್ದೇವೆ. ನಮ್ಮವರು ಅಧಿಕಾರ ಸಿಕ್ಕಾಗಲೆಲ್ಲ ಬೇರೆಲ್ಲರಿಗಿಂತಲೂ ಪ್ರಾಮಾಣಿಕವಾಗಿ ಉತ್ತಮ ಆಡಳಿತ ನೀಡಿದ್ದಾರೆ ಎಂದು ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.