ಸುಧೀರ್‌ಕುಮಾರ್ ಮುರೊಳ್ಳಿ  
ನ್ಯೂಸ್

ಬಿಜೆಪಿ-ಜೆಡಿಎಸ್ ಶಕ್ತಿ ವೃದ್ಧಿಸಿಕೊಳ್ಳುವ ವ್ಯರ್ಥ ಪ್ರಯತ್ನ

ಕೊಪ್ಪ: ಕಾವೇರಿ ನ್ಯಾಯಾಧೀಕರಣದ ಆದೇಶಕ್ಕೂ ಮತ್ತು ಬಿಜೆಪಿ-ಜೆಡಿಎಸ್‌ನ ಮೈತ್ರಿಗೂ ಅಂತರ್ಗತ ಸಂಬಂಧ ಇದ್ದಂತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್‌ಕುಮಾರ್ ಮುರೊಳ್ಳಿ ಟೀಕಿಸಿದರು.

ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲಿ ಕಾಲ ತಳ್ಳುತ್ತಿದ್ದ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಕಾವೇರಿ ತೀರ್ಪು ಎಂದ ಕೂಡಲೇ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಈ ಮೂಲಕ ಜೆಡಿಎಸ್ ಪ್ರಭಾವ ಕಡಿಮೆಯಾಗಿರುವ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್, ಬಿಜೆಪಿ ಒಟ್ಟಾಗಿ ಶಕ್ತಿ ವೃದ್ಧಿಸಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದರು.
ಕಾವೇರಿ ನ್ಯಾಯಾಧೀಕರಣ ತೀರ್ಪು ಬಂದಾಗ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ನೀರು ಬಿಟ್ಟಿದ್ದರು. ಇದು ಕುಮಾರಸ್ವಾಮಿ ಅವರ ಕಾಲಕ್ಕೂ ಅನ್ವಯಿಸುತ್ತದೆ. ಆದರೆ ಇಂದು ರಾಜ್ಯಕ್ಕೆ ಅನ್ಯಾಯವಾಗಿದೆ ಎನ್ನುವಂತೆ ಬಿಂಬಿಸಲಾಗುತ್ತಿದೆ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದ ಸಂದರ್ಭ ಪಕ್ಷ ರಾಜಕಾರಣವನ್ನೂ ಮೀರಿ ಅಂದು ಕರ್ನಾಟಕಕ್ಕೆ ಇದೇ ರೀತಿಯಾದ ತೀರ್ಪಿನ ಒತ್ತಡ ಬಂದಾಗ ಪ್ರಧಾನಿ ಮಧ್ಯಪ್ರವೇಶ ಮಾಡುವಂತೆ ಕೆಲಸ ಮಾಡಿದವರು ಅನಂತಕುಮಾರ್ ಎಂದು ಸ್ಮರಿಸಿದರು.
ಕೇಂದ್ರ ಮಂತ್ರಿಗಳಾದ ಪ್ರಲ್ಹಾದ ಜೋಷಿ, ನಿರ್ಮಲಾ ಸೀತಾರಾಮನ್, ಶೋಭಾ ಕರಂದ್ಲಾಜೆ ರಾಜ್ಯದ ಬಿಜೆಪಿ ಮುಖಂಡರಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿರುವ ಕುಮಾರಸ್ವಾಮಿ ಪ್ರಬಲರಾಗಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಪ್ರಧಾನಿ ಮಧ್ಯ ಪ್ರವೇಶಿಸುವಂತೆ ಮಾಡುವಲ್ಲಿ ಅವರ ಪಾತ್ರವೇನು ಎಂದು ಪ್ರಶ್ನಿಸಿದರು.
ನೆಲ, ಜಲ ವಿಚಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರ ಹೋರಾಟವನ್ನು ಅಲ್ಲಗಳೆಯುವಂತಿಲ್ಲ. ಆದರೆ ಎಚ್.ಡಿ.ಕುಮಾರಸ್ವಾಮಿ ಅವರು ಪುತ್ರನನ್ನು ಸಂಸದನನ್ನಾಗಿ ಮಾಡುವ ನಿಟ್ಟಿನಲ್ಲಿ ಮೈತ್ರಿ ಮಾಡಿಕೊಂಡಿದ್ದಾರೆ. ಜಾತ್ಯತೀತ ನಿಲುವು ಹೊಂದಿರುವವರು ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಬರಲು ಸಿದ್ಧರಿದ್ದಾರೆ ಎಂದರು.
ಮುಖಂಡರಾದ ಎಚ್.ಎಸ್.ಇನೇಶ್, ನುಗ್ಗಿ ಮಂಜುನಾಥ್, ನವೀನ್ ಕರುವಾನೆ, ನವೀನ್ ಮಾವಿನಕಟ್ಟೆ, ಜಾರ್ಜ್, ರಾಮಪ್ಪ, ಉಸ್ಮಾನ್, ಪ್ರಕಾಶ್ ಪೂಜಾರಿ, ಬರ್ಕತ್ ಆಲಿ, ಅರುಣ್ ಇದ್ದರು.