ನ್ಯೂಸ್

ಸ್ನೇಹಕ್ಕಾಗಿ ಪ್ರಾಣ ಕೊಡುತ್ತೇನೆಂದು ತನ್ನ ಕಾಲನ್ನೇ ಕತ್ತರಿಸಿಕೊಂಡು ಪ್ರಾಣ ಬಿಟ್ಟ ಗೆಳೆಯ

ಆಂಧ್ರಪ್ರದೇಶ​​: ಸ್ನೇಹಕ್ಕಾಗಿ ಸಾಯುತ್ತೇವೆ ಎನ್ನುವವರು ನಮ್ಮ ಸುತ್ತಮುತ್ತ ಅನೇಕರಿದ್ದಾರೆ. ಗೆಳೆಯರು ಮೋಜಿಗಾಗಿ ಹೀಗೆ ಹೇಳಿಕೊಳ್ಳುತ್ತಾರೆ. ಆದರೆ ಕಡಪ ಜಿಲ್ಲೆಯ ಯುವಕನೊಬ್ಬ ತನ್ನ ಸ್ನೇಹಿತರಿಗಾಗಿ ಪ್ರಾಣ ಕೊಡುತ್ತೇನೆ ಎಂದು ಕುಡಿದ ಅಮಲಿನಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ.

ಇಬ್ರಾಹಿಂ ಮೃತ ವ್ಯಕ್ತಿ. ಈತ ಮದ್ಯದ ಅಮಲಿನಲ್ಲಿ ತನ್ನ ಸ್ನೇಹಿತರಿಗಾಗಿ ಪ್ರಾಣ ಕೊಡುತ್ತೇನೆ ಎಂದು ಚಾಕುವಿನಿಂದ ಕಾಲು ಕತ್ತರಿಸಿಕೊಂಡಿದ್ದಾನೆ. ಆದರೆ ಚಾಕುವಿನ ಗಾಯದಿಂದ ಕಾಲಿನಿಂದ ಭಾರೀ ರಕ್ತಸ್ರಾವವಾಗಿ ಇಬ್ರಾಹಿಂ ಪ್ರಾಣ ಕಳೆದುಕೊಂಡಿದ್ದಾನೆ. ಕಡಪ ನಗರದ ಹಳೆ ಪುರಸಭೆ ಕಚೇರಿಯಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ.

ಮೃತಪಟ್ಟ ಇಬ್ರಾಹಿಂ ವಿರುದ್ಧ ಈ ಹಿಂದೆ ಹಲವು ಪ್ರಕರಣಗಳು ದಾಖಲಾಗಿದ್ದವು. ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಇಬ್ರಾಹಿಂ ಸಾವಿನ ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಡಪ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕುಡಿದ ಅಮಲಿನಲ್ಲಿದ್ದ ಇಬ್ರಾಹಿಂ ಸ್ನೇಹಕ್ಕೆ ಬೆಲೆಕೊಟ್ಟು ಗೆಳೆಯರಿಗಾಗಿ ಪ್ರಾಣ ಕೊಡುತ್ತೇನೆಂದು ಕೋಪದ ಭರದಲ್ಲಿ ಚಾಕುವಿನಿಂದ ತನ್ನ ಕಾಲಿಗೆ ಚಾಕು ಹಾಕಿದ್ದು, ತೀವ್ರ ರಕ್ತಸ್ರಾವವಾಗಿ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಮಧ್ಯರಾತ್ರಿ ಈ ಘಟನೆ ನಡೆದಿರುವುದರಿಂದ ಇದು ಆತ್ಮಹತ್ಯೆಯೇ ಅಥವಾ ಸ್ನೇಹಿತರ ಜತೆ ಬೇರೆ ವಿಚಾರವಾಗಿ ಇಬ್ರಾಹಿಂ ಸ್ನೇಹಿತರ ಮಧ್ಯೆ ಗಲಾಟೆ ಆಗಿದ್ಯಾ? ಎಂದು ಕಡಪಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.