ನ್ಯೂಸ್

ಸ್ವಾತಂತ್ರ್ಯ ಹೋರಾಟಗಾರ್ತಿ ಲಲಿತಾ ಟ್ಯಾಗೆಟ್ ನಿಧನ

ಚಾಮರಾಜನಗರ: ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಚಾಮರಾಜನಗರ ಜಿಲ್ಲೆಯ ಲಲಿತಾ ಜಿ. ಟ್ಯಾಗೆಟ್ ಮಂಗಳವಾರ ಬೆಳಗ್ಗೆ ನಿಧನರಾದರು. ಇವರಿಗೆ 90 ವರ್ಷ ವಯಸ್ಸಾಗಿತ್ತು. ಚಾಮರಾಜನಗರದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಲಲಿತಾ ಟ್ಯಾಗೆಟ್ ಅವರು 14ನೇ ವಯಸ್ಸಿನಲ್ಲೇ ಸ್ವಾತಂತ್ರ್ಯದ ಘೋಷಣೆಗಳಿಂದ ಸ್ಫೂರ್ತಿಗೊಂಡು ಚಳವಳಿಗೆ ಧುಮುಕಿದ್ದರು.‌ ಬ್ರಿಟಿಷರ ವಿರುದ್ಧದ ಮೆರವಣಿಗೆ, ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಅವರು ಕೆಲವೊಮ್ಮೆ ಪೊಲೀಸರ ಲಾಠಿಗಳನ್ನು ಕಿತ್ತು ಬಿಸಾಡುತ್ತಿದ್ದರಂತೆ. ಕೆಲವೊಮ್ಮೆ ಪೊಲೀಸ್ ಠಾಣೆಗಳ ಬಳಿ ಹೋಗಿ ಅಲ್ಲಿನ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಬರುತ್ತಿದ್ದರಂತೆ. ತನ್ನ ತಾಯಿ ಮನೆಯಲ್ಲಿ ಕೂಡಿ ಹಾಕಿದರೂ ಛಾವಣಿ ಹೆಂಚು ಇಳಿಸಿ ಹೊರಹೋಗಿ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಂತೆ. ಈ ಬಗ್ಗೆ ಸ್ವತಃ ಲಲಿತಾ ಟ್ಯಾಗೆಟ್ ಅವರೇ ಆಗಾಗ್ಗೆ ಹಳೇ ನೆನಪುಗಳನ್ನು ಮೆಲುಕು ಹಾಕುತ್ತಿದ್ದರಂತೆ. ಇನ್ನು ಸ್ವಾತಂತ್ರ್ಯ ಘೋಷಣೆಗೂ ಮುನ್ನ ಮೈಸೂರಿನಲ್ಲಿ ನಡೆದ ಚಳುವಳಿಯಲ್ಲಿ ಪಾಲ್ಗೊಂಡು ಜೈಲು ಸೇರಿದ್ದರು.

ಲಲಿತಾ ಟ್ಯಾಗೆಟ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚಾಮರಾಜನಗರ ಜಿಲ್ಲಾ ಆಡಳಿತದ ಪರವಾಗಿ ಅಪರ ಜಿಲ್ಲಾಧಿಕಾರಿ ಕಾತ್ಯಾಯಿನಿ ದೇವಿ, ತಹಸೀಲ್ದಾರ್ ಬಸವರಾಜು, ದಲಿತ ಮಹಾಸಭಾ ರಾಜ್ಯಾಧ್ಯಕ್ಷ ವೆಂಕಟರಮಣಸ್ವಾಮಿ, ಪಾಪು ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಸದಸ್ಯ ಸಿ.ಎಂ. ನರಸಿಂಹಮೂರ್ತಿ ಅಂತಿಮ ನಮನ ಸಲ್ಲಿಸಿದರು.