ಬೆಂಗಳೂರು: ಇ-ಮೇಲ್‌ನಲ್ಲಿ ಬಾಂಬ್ ಬೆದರಿಕೆ ಸಂದೇಶ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಿ ಸಂಸ್ಥೆಗೆ ಬೆದರಿಕೆ ಹಾಕಿದ್ದ ಆರೋಪಿಗಳ ಮಾಹಿತಿ ನೀಡುವಂತೆ ಕೋರಲಾಗಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ, ಡಿಸಿಎಂ ಮತ್ತು ಗೃಸ ಸಚಿವರಿಗೆ ಇ-ಮೇಲ್‌ನಲ್ಲಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿರುವ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಬೇರೆ ದೇಶದಲ್ಲಿ ಇರುವಂತಹ ಸಂಸ್ಥೆಯಾದ ಪ್ರೊಟಾನ್ ಎಂಬ ಮೇಲ್‌ನಿಂದ ಬೆದರಿಕೆ ಸಂದೇಶ ಬಂದಿದ್ದು, ಇ ಮೇಲ್ ಮಾಡಿರುವ ವ್ಯಕ್ತಿಯ ಮಾಹಿತಿ ನೀಡುವಂತೆ ನಮ್ಮ ಪೊಲೀಸರು ಆ ಸಂಸ್ಥೆಗೆ ಇ-ಮೇಲ್ ಕಳುಹಿಸಿದ್ದಾರೆ. ಆದರೆ ಆ ಸಂಸ್ಥೆಯಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ.
ಸುಮಾರು ೩೫ ಶಾಲೆಗಳಿಗೆ ಇ-ಮೇಲ್ ಬಾಂಬ್ ಬೆದರಿಕೆ ಬಂದಾಗ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಶಾಲೆಗಳಿಗೆ ಹೋಗಿ ಪರಿಶೀಲನೆ ನಡೆಸಿದ್ದವು. ಈ ಬೆದರಿಕೆ ಬಂದಾಗ ಯಾವುದೇ ಕಾರಣಕ್ಕೆ ನಿರ್ಲಕ್ಷಿಸುವುದಿಲ್ಲ. ಜತೆಗೆ ಆರೋಪಿಗಳ ಪತ್ತೆ ಬೇಕಾದ ಎಲ್ಲಾ ಕ್ರಮವನ್ನು ಜರುಗಿಸಲಾಗಿದೆ.
ಪ್ರೊಟಾನ್ ಮೇಲ್‌ನಿಂದ ಚೆನ್ನೈನ ಕೆಲ ಶಾಲೆಗಳಿಗೆ ಬಾಂಬ್ ಬೆದರಿಕೆಯ ಕರೆಗಳು ಬಂದಿತ್ತು. ಆಗ ತಮಿಳುನಾಡು ಸರ್ಕಾರ ಕೇಂದ್ರದ ಐಟಿ ಸಚಿವರಿಗೆ ಪ್ರೋಟಾನ್ ಮೇಲ್ ನಿಷೇಧಿಸುವಂತೆ ಪತ್ರ ಬರೆದಿದ್ದರು. ನೀವು ಏನಾದರೂ ಪತ್ರ ಬರೆದು ಮನವಿ ಮಾಡುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಸರ್ಕಾರದವರೂ ಎಚ್ಚೆತ್ತು ಪ್ರೊಟಾನ್ ಮೇಲ್ ಅನ್ನು ಭಾರತದಲ್ಲಿ ಅನುಮತಿಸದೇ ನಿಷೇಧಿಸಿದ್ದೆ ಆಗಿದ್ದರೆ ನಮ್ಮ ರಾಜ್ಯಕ್ಕೆ ಬೆದರಿಕೆ ಸಂದೇಶ ಬರುತ್ತಿರಲಿಲ್ಲ. ಅಂದರೆ ಕೇಂದ್ರದವರು ಏನು ಕ್ರಮ ಕೈಗೊಂಡಿಲ್ಲ ಎಂದು ಸ್ಪಷ್ಟವಾಗಿದೆ. ನಾವು ಕೂಡ ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡುತ್ತೇವೆ ಎಂದರು.