ಯಳಂದೂರು : ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಶಿಲ್ಪಾನಾಗ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ದೂರುಗಳ ಮಹಾಪೂರವೇ ಹರಿದು ಬಂದಿತು.
ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಸಮಸ್ಯೆಗಳಿಗೆ ಸಂಬಂದಿಸಿದಂತೆ ಒಟ್ಟು 153 ಅರ್ಜಿಗಳು ಸಲ್ಲಿಕೆಯಾದವು.
ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಯಳಂದೂರು ತಾಲೂಕು ಚಿಕ್ಕ ತಾಲೂಕು. ಆದರೂ ಜಿಲ್ಲಾಡಳಿತದ ವತಿಯಿಂದ ನಡೆದ ಜನಸ್ಪಂದನ ಕಾರ್ಯಕ್ರಮಕ್ಕೆ ಹೆಚ್ಚು ಸ್ಪಂದನೆ ಸಿಕ್ಕಿದೆ. ಇದರಲ್ಲಿ ಕಂದಾಯ ಇಲಾಖೆಗೆ 42 ತಾಲೂಕು ಪಂಚಾಯಿತಿ 37, ಪಟ್ಟಣ ಪಂಚಾಯಿತಿ 38, ಎಡಿಎಲ್‌ಆರ್ 04, ಕೆಎಸ್‌ಆರ್‌ಟಿಸಿ 4, ಸಮಾಜ ಕಲ್ಯಾಣ ಇಲಾಖೆಯ 3, ಕೃಷಿ ಇಲಾಖೆಯ 2, ತೋಟಗಾರಿಕಾ ಇಲಾಖೆಯ 2, ಅಂಗವಿಕಲರ 1 ಅರ್ಜಿ ಸೇರಿದಂತೆ ಒಟ್ಟು 153 ಅರ್ಜಿಗಳು ಬಂದಿವೆ. ಇದರಲ್ಲಿ ಸ್ಥಳದಲ್ಲೇ 20 ರಿಂದ 25 ಅರ್ಜಿಗಳ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ತಿಳಿಸಿದರು.
ವಿಶೇಷವಾಗಿ ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಬಸ್ ಸಂಪರ್ಕ ಕಲ್ಪಿಸುವುದು, ಮೈಸೂರಿಗೆ ಹೆಚ್ಚುವರಿ ಬಸ್‌ಗಳನ್ನು ಬಿಡುವುದು, ಪಟ್ಟಣದಿಂದ ಬೆಳಗ್ಗೆ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸುವ ಬಗ್ಗೆ ಮನವಿ ಸಲ್ಲಿಕೆಯಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಪರಿಹಾರ ಒದಗಿಸುವಂತೆ ಸೂಚನೆ ನೀಡಿದ್ದೇನೆ. ಅಲ್ಲದೆ ನಮ್ಮ ಜಿಲ್ಲೆಗೆ ಈಗಾಗಲೇ 42 ಹೊಸ ಕೆಎಸ್‌ಆರ್‌ಟಿಸಿ ಬಸ್ ಬಂದಿವೆ. ಇನ್ನು 38 ಹೊಸ ಬಸ್‌ಗಳು ಬರಲಿದ್ದು ಈ ಸಮಸ್ಯೆ ಶೀಘ್ರವೇ ನೀಗಲಿದೆ ಎಂದರು.
ಸಭೆಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು 20 ದಿನದೊಳಗೆ ವಿಲೇವಾರಿ ಮಾಡಬೇಕು. ಆದರೆ ಕಾಟಾಚಾರಕ್ಕೆ ಮಾಡಬಾರದು. ಸಾರ್ವಜನಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು. ಇದರಲ್ಲಿ ಅನೇಕ ಸಮಸ್ಯೆಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಬಗೆಹರಿಯುತ್ತದೆ. ಇದನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ತರದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಅಧಿಕಾರಿಗಳು ಹೊರಬೇಕು. ಮುಂದಿನ ದಿನಗಳಲ್ಲಿ ಇಂತಹ ಸಭೆಗಳನ್ನು ಹೋಬಳಿ ಮಟ್ಟದಲ್ಲೂ ಹಮ್ಮಿಕೊಳ್ಳಲು ಕ್ರಮ ವಹಿಸಲಾಗುವುದು ಎಂದರು.
ಗಮನ ಸೆಳೆದ ಕೆಲವು ಅರ್ಜಿಗಳು: ತಾಲೂಕಿನ ಯರಗಂಬಳ್ಳಿ, ಗುಂಬಳ್ಳಿ ಗ್ರಾಮ ವ್ಯಾಪ್ತಿಯಲ್ಲಿ 5 ಕರಿಕಲ್ಲಿನ ಕ್ವಾರಿಗಳು ನಡೆಯುತ್ತಿದೆ. ಇವೆಲ್ಲವೂ ಜನನಿಬಿಡ ಪ್ರದೇಶದಲ್ಲೇ ಇವೆ. ಅಲ್ಲದೆ ನಿಯಮಗಳನ್ನು ಉಲ್ಲಂಘಿಸಿ ಗಣಿಗಾರಿಕೆ ಮಾಡಲಾಗುತ್ತಿದೆ. ಇವೆಲ್ಲವೂ ಪ್ರಭಾವಿ ವ್ಯಕ್ತಿಗಳಿಗೆ ಸೇರಿದ್ದಾಗಿವೆ. ಇದು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿ ಬರುವುದರಿಂದ ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಇದಕ್ಕೆ ಪರಿಹಾರ ಒದಗಿಸಬೇಕು ಎಂದು ಸಿದ್ದು ಅರ್ಜಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಈ ಬಗ್ಗೆ ಅಧಿಕಾರಿಗಳ ಒಂದು ತಂಡ ರಚಿಸಿ ವರದಿ ಪಡೆದು ಕ್ರಮ ವಹಿಸುವ ಭರವಸೆ ನೀಡಿದರು.
ಪಟ್ಟಣದ ಮಹದೇಶ್ವರ ಚಿತ್ರಮಂದಿರದ ಬಳಿ ಇರುವ ಬಾರ್‌ಗೆ ಪರವಾನಗಿಯೇ ಇಲ್ಲ. ಹಾಗಾಗಿ ಇದನ್ನು ತೆರವುಗೊಳಿಸಬೇಕು. ಪಟ್ಟಣದ ಅಶ್ವಿನಿ ಆಸ್ಪತ್ರೆಯ ಬಳಿ ಹೊಸದಾಗಿ ಬಾರ್ ತೆರೆಯಲು ಅನುಮತಿ ನೀಡಬಾರದು. ಬೆಳೆ ವಿಮೆಯ ಹಣ ಇನ್ನೂ ಬಾಕಿ ಇದ್ದು, ಇದನ್ನು ಕೊಡಿಸಬೇಕು, ಕಂದಹಳ್ಳಿ ಗ್ರಾಮದ ಅಂಬೇಡ್ಕರ್ ಬಡಾವಣೆಯಲ್ಲಿ ಚರಂಡಿ ನಿರ್ಮಿಸುವುದು ಸೇರಿದಂತೆ ವಿವಿಧ ಅರ್ಜಿಗಳು ಸಲ್ಲಿಕೆಯಾದವು.
ಅಂಗವಿಕಲರ ಅರ್ಜಿಗಳನ್ನು ಸ್ವೀಕರಿಸಲು ಜಿಲ್ಲಾಧಿಕಾರಿ ಅವರ ಬಳಿಗೆ ಬಂದು ಅರ್ಜಿ ಸ್ವೀಕರಿಸಿ ಇವರ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮೀ, ಅಬಕಾರಿ ಉಪ ಆಯುಕ್ತ ನಾಗಶಯನ, ಉಪವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ಜಯಪ್ರಕಾಶ್, ಇಒ ಉಮೇಶ್, ಪಪಂ ಮುಖ್ಯಾಧಿಕಾರಿ ಮಹೇಶ್‌ಕುಮಾರ್, ಪ.ಪಂ. ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ, ಲಕ್ಷ್ಮೀ, ಸುಶೀಲಾ, ಮಹದೇವನಾಯಕ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಹಲವರು ಹಾಜರಿದ್ದರು.