ನೆಲಮಂಗಲ: ದುಷ್ಕರ್ಮಿಗಳು ಮನೆ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುವ ಘಟನೆ ದಾಬಸ್‌ಪೇಟೆ ಸಮೀಪದ ಹೊನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೊರಭಾಗದಿಂದ ಮನೆ ಬಾಗಿಲಿನ ಚಿಲಕ ಹಾಕಿ ಬೆಂಕಿ ಹಾಕಲಾಗಿದೆ. ಮನೆಯಲ್ಲಿದ್ದ ದಂಪತಿಗಳು ಹಾಗೂ 5 ತಿಂಗಳ ಮಗು ಅದೃಷ್ಟವಶಾತ್ ಪಾರಾಗಿದ್ದಾರೆ. ಈ ಬಗ್ಗೆ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುರುಷೋತ್ತಮ್ ಎಂಬಾತನ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಘಟನೆಯಿಂದ ಪುರುಷೋತ್ತಮ್ ಹಾಗೂ ಪತ್ನಿ ಆಶಾರಾಣಿಗೆ ಸುಟ್ಟ ಗಾಯಗಳಾಗಿವೆ. ತಡರಾತ್ರಿ ತಡರಾತ್ರಿ ಈ ಘಟನೆ ಸಂಭವಿಸಿದ್ದು, ಸ್ಥಳೀಯರು ತಕ್ಷಣ ಎಚ್ಚೆತ್ತುಕೊಂಡು ಬೆಂಕಿ ನಂದಿಸಿದ್ದಾರೆ. ಬೆಂಕಿಯಿಂದ ಸುಟ್ಟುಗಾಯಗಳಾಗಿರುವ ಪುರುಷೋತ್ತಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದುಷ್ಕರ್ಮಿಗಳು ಹಚ್ಚಿದ ಬೆಂಕಿ ಮನೆಗೆ ಆವರಿಸಿಕೊಳ್ಳುತ್ತಿದ್ದಂತೆ ಒಳಗಿನಿಂದ ಪುರುಷೋತ್ತಮ್ ಕಾಪಾಡಿ... ಕಾಪಾಡಿ ಎಂದು ಕೂಗಿದ್ದಾರೆ. ಕೂಡಲೇ ಎಚ್ಚೆತ್ತಕೊಂಡ ಸ್ಥಳೀಯರು, ಬೆಂಕಿ ನಂದಿಸಲು ಮುಂದಾಗಿದ್ದಾರೆ. ಬೆಂಕಿಯ ತೀವ್ರತೆಗೆ ಮನೆಯಲ್ಲಿದ್ದ ಬಟ್ಟೆ, ವಸ್ತುಗಳು ಸುಟ್ಟು ಹೋಗಿವೆ.
ಘಟನಾ ಸ್ಥಳಕ್ಕೆ ದಾಬಸ್‌ಪೇಟೆ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ತನಿಖೆಯ ನಂತರ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಉದ್ಧೇಶವೇನು ಎಂಬುದಕ್ಕೆ ಉತ್ತರ ಸಿಗಲಿದೆ.