ನ್ಯೂಸ್

ಸಿನಿಮಾ-ಧಾರಾವಾಹಿ ನಿರ್ದೇಶಕ, ನಟ ಕಟ್ಟೆ ರಾಮಚಂದ್ರ ಇನ್ನಿಲ್ಲ

ಬೆಂಗಳೂರು: ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ, ನಟ ಕಟ್ಟೆ ರಾಮಚಂದ್ರ ಅವರು ಶುಕ್ರವಾರ ಬೆಳಗ್ಗೆ ನಿಧನರಾದರು.

ಇವರಿಗೆ 75 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಬೆಂಗಳೂರಿನ ಸೇಂಟ್ ಜೋನ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇಂದು ಮಧ್ಯಾಹ್ನ ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.

1947ರ ಫೆಬ್ರವರಿ 15ರಂದು ಜನಿಸಿದ್ದ ಕಟ್ಟೆ ರಾಮಚಂದ್ರ ಅವರು ನಿರ್ದೇಶನ, ನಿರ್ಮಾಣ, ನಟನೆಯಲ್ಲೂ ತೊಡಗಿಸಿಕೊಂಡಿದ್ದರು. ತಬ್ಬಲಿ ನೀನಾದೆ ಮಗನೆ, ಒಂದು ಪ್ರೇಮದ ಕಥೆ, ಗೀಜಗನ ಗೂಡು, ನಮ್ಮಮ್ಮ ತಾಯಿ ಅಣ್ಣಮ್ಮ, ಗ್ರಹಣ, ಪ್ರೇಮ ಮತ್ಸರ, ಅಂತರಾಳ, ಕಾಡಿನ ಬೆಂಕಿ, ಬಿಂಬ... ಸೇರಿದಂತೆ ಚಿತ್ರಗಳಲ್ಲಿ ನಟಿಸಿದ್ದಾರೆ.

ಕಟ್ಟೆ ರಾಮಚಂದ್ರರು ನಿರ್ದೇಶಿಸಿದ 'ಅರಿವು' ಚಿತ್ರಕ್ಕೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಬಂದಿದೆ. 'ವೈಶಾಖದ ದಿನಗಳು' ಸಿನಿಮಾ ಕೂಡ ಇವರ ನಿರ್ದೇಶನದಲ್ಲೇ ತೆರೆಕಂಡಿತ್ತು.