ಶಿವಮೊಗ್ಗ: ಚಲನಚಿತ್ರ ಕ್ಷೇತ್ರವು ಕರಾವಳಿಯಂತೆ ಮಲೆನಾಡಿನಲ್ಲಿಯೂ ಉದ್ಯಮವಾಗಿ ಬೆಳೆಯಬೇಕು ಎಂದು ಶಾಖಾಹಾರಿ ಸಿನಿಮಾ ನಿರ್ಮಾಪಕ ರಾಜೇಶ್ ಕೀಳಂಬಿ ಅಭಿಪ್ರಾಯಪಟ್ಟರು.
ಗೋಪಾಳದ ಸಾಹಿತ್ಯ ಗ್ರಾಮದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಏರ್ಪಡಿಸಿದ್ದ 223ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಖಾಹಾರಿ ಸಿನಿಮಾ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಒಂದು ಚಲನಚಿತ್ರ ಅನೇಕ ಜನರಿಗೆ ಉದ್ಯೋಗ ಸೃಷ್ಟಿ ಮಾಡಿಕೊಡಲಿದ್ದು, ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತದೆ. ಹಾಗಾಗಿಯೇ ಜನರು ಚಿತ್ರಮಂದಿರಗಳಿಗೆ ಹೋಗಿ ಚಲನಚಿತ್ರ ನೋಡಬೇಕು ಎಂದರು.
ನಟ ಶ್ರೀಹರ್ಷ ಗೋ. ಭಟ್ ಮಾತನಾಡಿ, ಬಹಳ ವರ್ಷಗಳ ಹಿಂದೆ ಸಾಹಿತ್ಯ ಹುಣ್ಣಿಮೆ ವೇದಿಕೆಯಲ್ಲಿ ನಾಟಕ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿ ನಮ್ಮನ್ನೆಲ್ಲ ಪ್ರೋತ್ಸಾಹಿಸಿದ ಕೀರ್ತಿ ಡಿ.ಮಂಜುನಾಥ್‌ಗೆ ಸಲ್ಲಬೇಕು. ನಮ್ಮಂತಹ ಹಲವು ಪ್ರತಿಭೆಗಳಿಗೆ ಅವಕಾಶ ದೊರಕಿಸಿಕೊಡಲು ನೆರವಾಗಿದ್ದಾರೆ ಎಂದು ಸ್ಮರಿಸಿದರು.
ಚಲನಚಿತ್ರ ನಿರ್ದೇಶಕ ಸಂದೀಪ್ ಸುಂಕದ್ ಮಾತನಾಡಿ, ಹಲವು ಸಾಹಿತ್ಯ ಹುಣ್ಣಿಮೆಯಲ್ಲಿ ನಾವು ಕೆಲಸ ಮಾಡಿದ್ದೆವು. ಅದೇ ವೇದಿಕೆಯಲ್ಲಿ ಅತಿಥಿಯಾಗಿ ಅಭಿನಂದನೆ ಸ್ವೀಕರಿಸಿದ ಕ್ಷಣ ಸಂತೋಷ ತಂದಿದೆ ಎಂದರು.
ಚಿತ್ರ ತಂಡದ ರಂಜನಿ ಪ್ರಸನ್ನ, ವಿಶ್ವಜಿತ್ ರಾವ್, ಶಶಾಂಕ ನಾರಾಯಣ, ಶ್ರುತಿ ಮಡವಾಳೆ, ಸುಧೀಂದ್ರ ರಾವ್ ಅವರನ್ನು ಅಭಿನಂದಿಸಲಾಯಿತು. ಇದೇ ವೇಳೆ ಚಲನಚಿತ್ರ ತಂಡದವರೊಂದಿಗೆ ಸಭಿಕರು ಸಂವಾದ ನಡೆಸಿದರು. ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಕವಿಗಳಾದ ಧರಣೇಪ್ರೀಯೆ ಕವನ ವಾಚಿಸಿದರು. ನಂದನ್ ಕುಪ್ಪಳಿ ಅವರ ಭಾವರೇಖೆ ಹನಿಗವನ ಸಂಕಲನದಿಂದ ಆಯ್ದ ಹನಿಗವನಗಳನ್ನು ವಾಚಿಸಿದರು. ಕಸಾಸಾಂಸ್ಕೃತಿಕ ವೇದಿಕೆ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಮಂಜಪ್ಪ, ಭೈರಾಪುರ ಶಿವಪ್ಪ ಗೌಡ, ದೀಪ್ತಿ ಶಿವಕುಮಾರ್, ಎಸ್.ಶಿವಮೂರ್ತಿ ಉಪಸ್ಥಿತರಿದ್ದರು.