ನ್ಯೂಸ್

ವಿಳಾಸದ ವಿಚಾರಕ್ಕೆ ಜಗಳ: ವ್ಯಕ್ತಿಯೊಬ್ಬರ ಮೇಲೆ ಹಲ್ಲೆ

ಬೆಂಗಳೂರು: ವಿಳಾಸದ ವಿಚಾರಕ್ಕೆ ಜಗಳ ನಡೆದು ಡೆಲಿವರಿ ಬಾಯ್ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದಾನೆ.

ಬಸವೇಶ್ವರನಗರದ ಜಡ್ಜಸ್ ಕಾಲನಿ ನಿವಾಸಿ ಶಶಾಂಕ್(೩೦) ಹಲ್ಲೆಗೊಳಗಾದವರು.

ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇ ೨೧ರಂದು ಮಧ್ಯಾಹ್ನ ೨ ಗಂಟೆಗೆ ಈ ಘಟನೆ ನಡೆದಿದೆ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಜೆಪ್ಟೋ ಡೆಲಿವರಿ ಬಾಯ್ ವಿಷ್ಣುವರ್ಧನ್ ವಿರುದ್ಧ ಪ್ರಕರಣ ದಾಖಲಿಸಿ, ಆತನ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರುದಾರ ಶಶಾಂಕ್ ಅವರ ಪತ್ನಿ ಮೇ ೨೧ರಂದು ಜೆಪ್ಟೋ ಆ್ಯಪ್‌ನಲ್ಲಿ ದಿನಸಿ ವಸ್ತುಗಳನ್ನು ಆರ್ಡರ್ ಮಾಡಿದ್ದರು. ಈ ವಸ್ತುಗಳನ್ನು ಡೆಲಿವರಿ ಕೊಡಲು ಡೆಲಿವರಿ ಬಾಯ್ ವಿಷ್ಣುವರ್ಧನ್, ಶಶಾಂಕ್ ಅವರ ಮನೆ ಬಳಿ ಬಂದಿದ್ದಾನೆ. ಈ ವೇಳೆ ಶಶಾಂಕ್ ಅವರ ನಾದಿನಿ ಆ ವಸ್ತುಗಳನ್ನು ಪಡೆದುಕೊಳ್ಳಲು ಹೋಗಿದ್ದು, ಆಗ ಸರಿಯಾದ ವಿಳಾಸ ನೀಡಲು ಆಗುವುದಿಲ್ಲವೇ ಎಂದು ಶಶಾಂಕ್ ಅವರ ನಾದಿನಿಗೆ ವಿಷ್ಣುವರ್ಧನ್ ಜೋರಾಗಿ ಬೈಯಲು ಆರಂಭಿಸಿದ್ದ. ಇದನ್ನು ಕೇಳಿಸಿಕೊಂಡ ಶಶಾಂಕ್ ಮಧ್ಯ ಪ್ರವೇಶಿಸಿ, ಏಕೆ ಇಷ್ಟು ಜೋರಾಗಿ ಮಾತನಾಡುತ್ತಿದ್ದೀರಾ? ಹೆಣ್ಣು ಮಕ್ಕಳೊಂದಿಗೆ ಸರಿಯಾಗಿ ಮಾತನಾಡಲು ಬರುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ವಿಷ್ಣುವರ್ಧನ್, ನಾನು ಅವಳ ಜತೆ ಮಾತನಾಡುತ್ತಿರುವೆ. ನೀನು ಯಾರೋ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಏಕಾಏಕಿ ಶಶಾಂಕ್ ಅವರ ಎಡಭಾಗದ ಕಣ್ಣಿನ ಭಾಗಕ್ಕೆ ಕೈನಿಂದ ಹಲವು ಬಾರಿ ಗುದ್ದಿದ್ದಾನೆ. ತಪ್ಪಿಸಿಕೊಳ್ಳಲು ಮುಂದಾದಾರು ಅಡ್ಡಗಟ್ಟಿ ಶಶಾಂಕ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

ಹಲ್ಲೆಯಿಂದ ಗಾಯಗೊಂಡಿದ್ದ ಶಶಾಂಕ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನನಗೆ ನ್ಯಾಯಬೇಕು:

ಡೆಲಿವರಿ ಬಾಯ್ ವಿಷ್ಣುವರ್ಧನ್, ಶಶಾಂಕ್ ಮೇಲೆ ಹಲ್ಲೆ ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಕುರಿತು ವಿಡಿಯೋ ಮಾಡಿರುವ ಶಶಾಂಕ್, ನನ್ನ ಕಣ್ಣಿನ ಎಡಭಾಗದ ಬಳಿ ಪೆಟ್ಟು ಬಿದ್ದಿದೆ. ಸದ್ಯ ರಾಜಾಜಿನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ. ಒಂದು ವಾರದೊಳಗೆ ಸರಿಹೋಗದಿದ್ದಲ್ಲಿ ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ವೈದ್ಯರು ಹೇಳಿದ್ದಾರೆ. ಈ ಘಟನೆ ಸಂಬಂಧ ಡೆಲಿವರಿ ಬಾಯ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಘಟನೆಯಿಂದ ಸಾಕಷ್ಟು ಬೇಸರವಾಗಿದೆ. ನನಗೆ ನ್ಯಾಯಬೇಕು ಎಂದು ಶಶಾಂಕ್ ಆಗ್ರಹಿಸಿದ್ದಾರೆ.