Student Murder: ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ 10ನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಅದೇ ಶಾಲೆ 8ನೇ ತರಗತಿ ವಿದ್ಯಾರ್ಥಿ ಚಾಕು ಇರಿದು ಕೊಲೆ ಮಾಡಿರುವ ಘಟನೆ ಗುಜರಾತ್ನ ಅಹ್ಮದಾಬಾದ್ನಲ್ಲಿ ನಡೆದಿದ್ದು, ಪೋಷಕರು ಮತ್ತು ಸ್ಥಳೀಯರು ಶಾಲೆ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ ಎಂದು ಬುಧವಾರ(ಆಗಸ್ಟ್ 20) ವರದಿಯಾಗಿದೆ.
ಅಹಮದಾಬಾದ್‌ನ ಖೋಖ್ರಾದ ಸೆವೆಂತ್-ಡೇ ಅಡ್ವೆಂಟಿಸ್ಟ್ ಹೈಯರ್ ಸೆಕೆಂಡರಿ ಶಾಲೆಯ ಆವರಣದ ಹೊರಗೆ ಈ ಘಟನೆ ನಡೆದಿದೆ. 10ನೇ ತರಗತಿಯ ವಿದ್ಯಾರ್ಥಿ ನಯನ್ ಸಾವು. ಎಫ್‌ಐಆರ್ ದಾಖಲಿಸಲಾಗಿದ್ದು, ಅಪ್ರಾಪ್ತ ವಯಸ್ಕ ಆರೋಪಿಯನ್ನು ಬಾಲಾಪರಾಧಿ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಮಂಗಳವಾರ ಮಧ್ಯಾಹ್ನ ಶಾಲೆ ಬಿಡುವ ಅವಧಿಯ ಗಂಟೆ ಬಾರಿಸುತ್ತಿದ್ದಂತೆ 10ನೇ ತರಗತಿಯ ನಯನ್ ಕೊಠಡಿಯಿಂದ ಆಚೆ ಬಂದು ಮನೆಗೆ ಹೊರಟಿದ್ದಾನೆ. ಶಾಲೆಯಿಂದ ಹೊರಬರುತ್ತಿದ್ದಂತೆ ಜೂನಿಯರ್ ಹುಡುಗರು ಅವನನ್ನು ಸುತ್ತುವರೆದಿದ್ದಾರೆ. ಮಾತಿನ ಚಕಮಕಿ ನಡೆದು ತಕ್ಷಣ 8ನೇ ತರಗತಿಯ ಬಾಲಕನೊಬ್ಬ ಚಾಕು ಇರಿದು ಪರಾರಿಯಾಗಿದ್ದ ಎನ್ನಲಾಗಿದೆ.
ಇದನ್ನೂ ಓದಿ: ನಾಯಿ ಕಳ್ಳಸಾಗಾಣಿಕೆ: ಬೆಹಲ್ನ ಆಶ್ರಯ ತಾಣದಲ್ಲಿ ನಾಯಿ ಹಾಗೂ ಬೆಕ್ಕುಗಳ ಶವ ಪತ್ತೆ! | Dog Trafficking
ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಯನ ತನ್ನ ಹೊಟ್ಟೆಯ ಮೇಲೆ ಕೈ ಹೊತ್ತುಕೊಂಡು ಗಾಯವನ್ನು ಮುಚ್ಚಿಕೊಂಡು ಶಾಲೆಯೊಳಗೆ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ವಿದ್ಯಾರ್ಥಿಯನ್ನು ಮಣಿನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆ.
ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ಪ್ರಕರಣದಲ್ಲಿ ಅಪ್ರಾಪ್ತ ವಯಸ್ಕ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಂಡಿದ್ದಾರೆ ಮತ್ತು ಘಟನೆಯ ಸಮಯದಲ್ಲಿ ಹಾಜರಿದ್ದ ಇತರ ವಿದ್ಯಾರ್ಥಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.(ಏಜೆನ್ಸೀಸ್)