ಮೈಸೂರು: ಹಣಕಾಸು ವಿಚಾರವಾಗಿ ಸ್ನೇಹಿತರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದ್ದು, ವರುಣ ನಾಲೆಯ ಅಮೃತ ಬಡಾವಣೆ ಬಳಿ ನಾಲೆಗೆ ತಳ್ಳಿ ಕೊಲೆ ಮಾಡಲಾಗಿದೆ.
ನಗರದ ಗೌಸಿಯಾನಗರ ನಿವಾಸಿ ಅಯೂಬ್‌ಖಾನ್(28) ಕೊಲೆಯಾದವ. ಅಯೂಬ್‌ಖಾನ್‌ನನ್ನು ಆತನ ಸ್ನೇಹಿತ ಮೊಹಮದ್ ಆಜಮ್(25) ನಾಲೆಗೆ ತಳ್ಳಿ ಕೊಲೆ ಮಾಡಿದ್ದು, ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ವುಡ್ ಪಾಲಿಶ್ ಕೆಲಸ ಮಾಡಿಕೊಂಡಿದ್ದ ಇಬ್ಬರ ನಡುವೆ ಹಣಕಾಸಿನ ವ್ಯವಹಾರವಿತ್ತು. ಈ ಸಂಬಂಧ ಮಹಮ್ಮದ್ ಅಜಮ್ ಅಯೂಬ್‌ಖಾನ್‌ನನ್ನು ನಾಲೆಯ ಬಳಿ ಬರುವಂತೆ ಹೇಳಿದ್ದು, ಅಯೂಬ್ ಖಾನ್ ತನ್ನ ಸ್ನೇಹಿತ ಸೈಯದ್‌ನೊಂದಿಗೆ ತೆರಳಿದ್ದಾನೆ.
ಈ ವೇಳೆ ಇಬ್ಬರ ನಡುವೆ ಜಗಳವಾಗಿದ್ದು, ಅಯೂಬ್ ಖಾನ್‌ನನ್ನು ಮಹಮ್ಮದ್ ಅಜಮ್ ನಾಲೆಗೆ ತಳ್ಳಿದ್ದಾನೆ ಎಂದು ಸೈಯದ್ ಮೃತನ ಕುಟುಂಬದವರಿಗೆ ಮಾಹಿತಿ ನೀಡಿದ್ದಾನೆ. ಮೃತನ ಸೋದರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಮೃತನ ಶವ ಚಿಕ್ಕಳ್ಳಿ ಬಳಿ ಸಿಕ್ಕಿದ್ದು, ಕುಟುಂಬಸ್ಥರಿಗೆ ನೀಡಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.