ನ್ಯೂಸ್

ಸ್ನೇಹಿತರ ನಡುವೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯ

ಬೆಂಗಳೂರು: ಮದ್ಯದ ಪಾರ್ಟಿ ವೇಳೆ ಇಬ್ಬರು ಸ್ನೇಹಿತರ ನಡುವೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ.

ಮಡಿವಾಳದ ವೆಂಕಟೇಶ್ವರ ಲೇಔಟ್ ನಿವಾಸಿ ಮಾರ್ಟಿನ್ ಸೈಮನ್(೨೮) ಕೊಲೆಯಾದವ. ಕೃತ್ಯ ಎಸಗಿದ ಇನ್ಸೆಂಟ್ ರಾಜು(೨೬) ಎಂಬಾತನನ್ನು ಬಂಧಿಸಲಾಗಿದೆ. ಶುಕ್ರವಾರ ರಾತ್ರಿ ೯ ಗಂಟೆಗೆ ಠಾಣೆ ವ್ಯಾಪ್ತಿಯ ವೆಂಕಟೇಶ್ವರ ಲೇಔಟ್‌ನ ೧೮ನೇ ಕ್ರಾಸ್‌ನ ನಾಲ್ಕನೇ ಮಹಡಿಯ ಕಟ್ಟಡದ ಟೆರಾಸ್ ಮೇಲೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಮಿಳುನಾಡು ಮೂಲದ ಮಾರ್ಟಿನ್ ಸೈಮನ್ ನಗರದ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕುಟುಂಬದ ಜತೆಗೆ ವೆಂಕಟೇಶ್ವರ ಲೇಔಟ್‌ನ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಮೂರನೇ ಮಹಡಿಯಲ್ಲಿ ವಾಸವಾಗಿದ್ದ. ಆರೋಪಿ ಇನ್ಸೆಂಟ್ ರಾಜು, ಖಾಸಗಿ ಬ್ಯಾಂಕ್‌ನಲ್ಲಿ ಸಾಲ ವಸೂಲಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಈತ ಕೂಡ ಸೈಮನ್ ವಾಸವಾಗಿದ್ದ ಕಟ್ಟಡದ ನೆಲಮಹಡಿಯ ಮನೆಯಲ್ಲಿ ಒಬ್ಬನೇ ವಾಸವಾಗಿದ್ದ.

ಶುಕ್ರವಾರ ರಾತ್ರಿ ಕಟ್ಟಡದ ಟೆರಾಸ್ ಮೇಲೆ ಇಬ್ಬರು ಮದ್ಯದ ಪಾರ್ಟಿ ಮಾಡಲು ಹೋಗಿದ್ದು, ಆ ಸಂದರ್ಭದಲ್ಲಿ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ವಾಗ್ವಾದ ನಡೆದಿದೆ. ಅದರಿಂದ ಕೋಪಗೊಂಡ ಆರೋಪಿ, ಪ್ಲಾಸ್ಟಿಕ್ ನೀರಿನ ಟ್ಯಾಂಕ್‌ಗೆ ಆಧಾರವಾಗಿ ಬಳಸಿದ್ದ ಇಟ್ಟಿಗೆಯಿಂದ ಸೈಮನ್ ತಲೆಗೆ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಸೈಮನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಾಬರಿಗೊಂಡ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಇಬ್ಬರ ನಡುವಿನ ಗಲಾಟೆ ಶಬ್ಧ ಕೇಳಿ ಸ್ಥಳೀಯರು ಕಟ್ಟಡದ ಟೆರಾಸ್ ಮೇಲೆ ಬಂದು ನೋಡಿದ್ದಾಗ ಸೈಮನ್ ರಕ್ತಸ್ರಾವದಿಂದ ಮೃತಪಟ್ಟಿರುವುದು ಗೊತ್ತಾಗಿದೆ. ಬಳಿಕ ಪೊಲೀಸ್ ಸಹಾಯವಾಣಿ ೧೧೨ಗೆ ಕರೆ ಮಾಡಿ ಮಾಹಿತಿ ನೀಡಲಾಗಿದೆ. ಘಟನಾ ಸ್ಥಳಕ್ಕೆ ಬಂದು ಪರಿಶೀಲಿಸಿ, ಕುಟುಂಬಸ್ಥರಿಂದ ದೂರು ಪಡೆದುಕೊಂಡು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದರು. ಬಳಿಕ ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು, ಶನಿವಾರ ಮಧ್ಯಾಹ್ನ ಸ್ನೇಹಿತನ ಮನೆಯಲ್ಲಿ ಅಡಗಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಆರೋಪಿ, ಮಾರ್ಟಿನ್ ಸೈಮನ್‌ನ ಕುಟುಂಬದ ವೈಯಕ್ತಿಕ ವಿಚಾರ ಹಾಗೂ ಹಣಕಾಸಿನ ವಿಚಾರದ ಬಗ್ಗೆ ಮಾತನಾಡಿದ್ದಾನೆ. ಅದೇ ಕಾರಣಕ್ಕೆ ಕೊಲೆಯಾಗಿರುವ ಸಾಧ್ಯತೆಯಿದೆ. ಈ ಮಧ್ಯೆ ಕಳೆದ ೧೦ ದಿನಗಳಲ್ಲಿ ಮೂರು ಬಾರಿ ಇಬ್ಬರ ನಡುವೆ ಜಗಳ ನಡೆದಿದೆ ಎಂದು ಮೂಲಗಳು ತಿಳಿಸಿವೆ.